ಅದು ಕಬ್ಬಿನ ಗದ್ದೆ. ಶಾಲಾ ಬಾಲಕಿಯೋರ್ವಳು ಭಯದಿಂದ ನಡುಗುತ್ತಾ ನಿಂತಿದ್ದಾಳೆ ಅಲ್ಲಿ. ಅವಳ ಸುತ್ತಲೂ ಕಾಮುಕರ ಗುಂಪೇ ನೆರೆದಿದೆ. ಭಯದಿಂದ ಸುತ್ತಲೂ ನೋಡುತ್ತಿರುವ ಹುಡುಗಿ ಯಾರಾದರು ಬಂದು ತನಗೆ ಸಹಾಯ ಮಾಡುತ್ತಾರಾ ಎಂಬ ಕೊನೆಯ ಆಸೆಯಿಂದ ನೋಡುತ್ತಿದ್ದಾಳೆ. ಆದರೆ ಆಕೆಯ ಕೂಗು ಯಾರಿಗೂ ಕೇಳಿಸುತ್ತಿಲ್ಲ. ಯಾರೋ ಹಲ್ಲು ಕಿರಿದು ನಗುತ್ತಿರುವ ಧ್ವನಿ ಕೇಳಿ ಬರುತ್ತಿದೆ. ಅಷ್ಟರಲ್ಲಿ ಒಬ್ಬ ದಾಂಡಿಗ ಆಕೆಯ ಮೇಮೇಲೆರಗುತ್ತಾನೆ. ಇದೇನು ಚಲನಚಿತ್ರದ ದೃಶ್ಯದ ಬಗ್ಗೆ ಮಾತಾಡುತ್ತಿದ್ದೇವೆ ಎಂದುಕೊಳ್ಳುತ್ತಿದ್ದೀರಾ? ಇಲ್ಲ ಇದು ಅಪರಾಧಗಳ ರಾಜಧಾನಿ ಎನ್ನಿಸಿಕೊಂಡಿರುವ ಉತ್ತರ ಪ್ರದೇಶ ರಾಜ್ಯದಲ್ಲಿ ಮಾರಾಟವಾಗುತ್ತಿರುವ ವಿಡಿಯೋದಲ್ಲಿ ಕಂಡು ಬರುವ ದೃಶ್ಯ.
ಹೌದು, ದೇಶದಲ್ಲಿ ಮಹಿಳೆಯರ, ಬಾಲಕಿಯರ ಮೇಲಿನ ಅತ್ಯಾಚಾರ ಘಟನೆಗಳು ಕೊನೆ ಇಲ್ಲದಂತೆ ಬೆಳಕಿಗೆ ಬರುತ್ತಿವೆ. ಪ್ರತಿಯೊಬ್ಬ ಮಹಿಳೆ ಮನೆ ಹೊರಗಷ್ಟೇ ಅಲ್ಲ ಒಳಗೂ ಆತಂಕದಿಂದ ಜೀವಿಸುವಂತಾಗಿದೆ. ಅತ್ಯಾಚಾರದಂತಹ ಘೋರ ದೌರ್ಜನ್ಯದ ಘಟನೆಗಳ ಬಗ್ಗೆ ಕೇಳಿಯೇ ಬೆಚ್ಚಿ ಬೀಳುವಾಗ ಅಂತಹ ಕರಾಳ ಕೃತ್ಯದ ವಿಡಿಯೋಗಳು ಮಾರಾಟವಾಗುತ್ತಿವೆ ಎಂದರೆ ಯುವ ಮನಸ್ಸಗಳು ಎಷ್ಟು ಹದಗೆಟ್ಟಿ ಹೋಗಿವೆ. ಕಾನೂನು ಸುವ್ಯವಸ್ಥೆ ಎಂತಹ ಸ್ಥಿತಿಯಲ್ಲಿದೆ ಎಂದು ಊಹಿಸಿ ನೋಡಿ.
ಅತ್ಯಾಚಾರಕ್ಕೆ ಒಳಗಾದವರನ್ನು ಬೆದರಿಸಲು ಉಪಯೋಗಿಸುತ್ತಿದ್ದ ರೇಪ್ ವಿಡಿಯೋಗಳು ಉತ್ತರ ಪ್ರದೇಶದಾದ್ಯಂತ ಸಾಮಾನುಗಳು, ವಸ್ತುಗಳು, ತರಕಾರಿಗಳು ಮಾರಾಟವಾದಂತೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ದಿನವೊಂದಕ್ಕೆ 100ರಿಂದ 1,000 ಸಂಖ್ಯೆಯಲ್ಲಿ ಮೊಬೈಲ್ ಕರೆನ್ಸಿ ರಿಚಾರ್ಜ್, ಸಿಡಿ ಸೆಂಟರ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಬೆಚ್ಚಿ ಬೀಳಿಸುವ ಮಾಹಿತಿ ಹೊರ ಬಿದ್ದಿದೆ. 30 ಸೆಕೆಂಡ್‌ಗಳಿಂದ ಹಿಡಿದು5 ನಿಮಿಷಗಳಷ್ಟು ಕಾಲಾವಧಿಯ ಈ ವಿಡಿಯೋಗಳು 50 ರಿಂದ 150 ರೂಪಾಯಿಗೆ ಮಾರಾಟವಾಗುತ್ತಿವೆ.
ಪೊಲೀಸರಿಗೆ ಸಿಗದಂತೆ ಮೊಬೈಲ್ ಕರೆನ್ಸಿ ಅಂಗಡಿಯವರು, ಸಿಡಿ ಅಂಗಡಿ ಮಾಲೀಕರು ತಮ್ಮ ಪರಿಚಯಸ್ಥರಿಗೆ ಮಾತ್ರ ವಿಡಿಯೊವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಆಗ್ರಾದ ಬೆಲಾನ್ ಗಂಜ್, ಕಮಲಾನಗರ್, ಬಾಲ್ಕೇಶ್ವರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸ್ಮಾರ್ಟ್ ಫೋನ್, ಪೆನ್ ಡ್ರೈವ್ ಗಳಿಗೆ ಈ ವಿಡಿಯೋಗಳನ್ನು ಡೌನ್ ಲೋಡ್ ಮಾಡಿ ಕೊಡಲಾಗುತ್ತಿದೆ. ಕೆಲವರು ಅಂತರ್ಜಾಲದಲ್ಲಿ ಪೋಸ್ಟ್ ಮಾಡಲಾಗಿರುವ ರೇಪ್ ವಿಡಿಯೋಗಳನ್ನು ಡೌನ್ ಲೋಡ್ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಜತೆಗೆ ರೇಪ್ ಎಸಗಿದ ದುರುಳರೇ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋವನ್ನು ಅಪ್ಲೋಡ್ ಮಾಡುವ ನೀಚ ಕೆಲಸಕ್ಕೆ ಇಳಿಯುತ್ತಾರೆ ಎಂದು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.