ಬಹುಜನ ಸಮಾಜವಾದಿ ನಾಯಕಿ ಮಾಯಾವತಿ ಇಂದು ಗುಜರಾತ್‌ಗೆ ಭೇಟಿ ನೀಡಲಿದ್ದು ಉನಾ ದಾಳಿ ಪೀಡಿತರನ್ನು ಭೇಟಿಯಾಗಲಿದ್ದಾರೆ. ತನ್ನ ಪಕ್ಷದ ಹೆಜ್ಜೆಗುರುತನ್ನು ಉತ್ತರ ಪ್ರದೇಶದ ಹೊರಗೆ ವಿಸ್ತರಿಸುವುದು ಮತ್ತು ದೇಶದಲ್ಲಿ ನಡೆಯುತ್ತಿರುವ ದಲಿತರ ವಿರುದ್ಧದ ಹಿಂಸಾಚಾರದ ಕುರಿತು ಧ್ವನಿ ಎತ್ತುವುದು ಅವರ ಈ ಭೇಟಿಯ ಹಿಂದಿನ ಉದ್ದೇಶ.
ಜನವರಿಯಲ್ಲಿ ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಿಂದ ಹಿಡಿದು ಇತ್ತೀಚಿಗೆ ಗುಜರಾತ್‌ನ ಉನಾದಲ್ಲಿ ಜುಲೈ 11ರಂದು ಸತ್ತ ಆಕಳ ಚರ್ಮವನ್ನು ಕಿತ್ತಿದ್ದಕ್ಕಾಗಿ ನಾಲ್ಕು ದಲಿತರನ್ನು ಕಟ್ಟಿ ಹಾಕಿ ಥಳಿಸಿದ್ದರ ಘಟನೆಯವರೆಗೆ ದಲಿತರ ಮೇಲಿನ ಎಲ್ಲ ದೌರ್ಜನ್ಯದ ವಿರುದ್ಧ ಮಾಯಾವತಿ ಸಂಸತ್ತಿನ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿದ್ದಾರೆ.
ಉನಾ ಘಟನೆಯನ್ನು ಖಂಡಿಸಿ ಜುಲೈ 31 ರಂದು ಅಹಮದಾಬಾದ್‌ನಲ್ಲಿ ಸಾವಿರಾರು ದಲಿತರು ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದರು. ಅಂದು ಇನ್ನು ಮೇಲೆ ಸತ್ತ ಪಶುವಿನ ದೇಹವನ್ನು ಎತ್ತಬಾರದು ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಮರುದಿನ ಪ್ರಧಾನಿ ಮೋದಿ ವಿರುದ್ಧ ಸಂಸತ್ತಿನಲ್ಲಿ ಹರಿಹಾಯ್ದಿದ್ದ ಮಾಯಾವತಿ ಮೌನ ಮುರಿದು ದಲಿತರ ವಿರುದ್ಧದ ದೌರ್ಜನ್ಯದ ಬಗ್ಗೆ ಮಾತಾಡುವಂತೆ ಹೇಳಿದ್ದರು.
ಮೃತ ಜಾನುವಾರುಗಳ ಚರ್ಮ ತೆಗೆಯುತ್ತಿದ್ದ ಕೆಲ ದಲಿತ ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ರಸ್ತೆ ಬದಿಯಲ್ಲೆ ಅವರನ್ನು ಅರೆ ಬೆತ್ತಲೆಗೊಳಿಸಿ ಥಳಿಸಲಾಗಿತ್ತು. ಇದರಿಂದಾಗಿ ದಲಿತ ಸಮುದಾಯದವರು ಭಾರಿ ಪ್ರತಿಭಟನೆ ನಡೆಸಿದ್ದರು. ಇಬ್ಬರು ಮೃತಪಟ್ಟ ನಂತರ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.