ಚೆನ್ನೈ: ಭಾನುವಾರ ಬೆಳಿಗ್ಗೆ ಫೆಂಗಲ್ ಚಂಡಮಾರುತವು ತಮಿಳುನಾಡಿನ ಉತ್ತರ ಕರಾವಳಿ ಮತ್ತು ಪುದುಚೇರಿ ಕರಾವಳಿ ಮೂಲಕ ಹಾದುಹೋಗಿದೆ. ಅದರ ಪರಿಣಾಮ ಆ ಭಾಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
ಚಂಡಮಾರುತವು ಪಶ್ಚಿಮ ನೈರುತ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯನ್ನು ಕಾರೈಕಾಲ್ ಮತ್ತು ಮಹಾಬಲಿಪುರಂ ನಡುವೆ, ಪುದುಚೇರಿಯ ಬಳಿ ಗಂಟೆಗೆ 70-80 ಕಿಮೀ ವೇಗದಲ್ಲಿ ಹಾದುಹೋಗುವ ನಿರೀಕ್ಷೆಯಿದೆ. ಮುಂದೆ ಗಂಟೆಗೆ 90 ಕಿ.ಮೀ ವರೆಗೆ ತಲುಪಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಈ ಮಧ್ಯೆ, ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಸಮೀಪದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಚೆಂಗಲ್ಪಟ್ಟು ಜಿಲ್ಲೆಯ ಕಲ್ಪಾಕ್ಕಂ ಬಳಿಯ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಚಂಡಮಾರುತದ ಹಿನ್ನೆಲೆ ತಮಿಳುನಾಡು ಮತ್ತು ಪುದುಚೇರಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ವಾರ್ ರೂಮ್ ಕಾರ್ಯಾಚರಣೆ, ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತಿದ್ದು, ತಮಿಳುನಾಡಿನ 4000 ಸರ್ಕಾರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲೂ ಶನಿವಾರದಿಂದ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ರಾತ್ರಿಯಿಂದ ಮಳೆಯಾಗುತ್ತಿದ್ದು, ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲವು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.<>