ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ರಾತ್ರಿಯಿಂದ ಮಳೆಯಾಗುತ್ತಿದ್ದು ನಗರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಒಂದು ಕಡೆ ಮಳೆ ವಾತಾವರಣ ಇದ್ದರೆ, ಮತ್ತೊಂದೆಡೆ ಚಳಿ ವಾತವರಣ ರಾಜಧಾನಿ ಬೆಂಗಳೂರಿನ ಜನತೆ ನಡುಗುವಂತೆ ಮಾಡಿದೆ. ಬೆಂಗಳೂರು ಮಾತ್ರವಲ್ಲದೇ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ.
ಹವಾಮಾನ ಇಲಾಖೆ ಮೂಲಗಳ ಪ್ರಕಾರ ಮುಂದಿನ ಮೂರು ದಿನ ನಗರದಲ್ಲಿ ಚಳಿ ಮುಂದುವರೆಯುವ ಸಾಧ್ಯತೆ ಇದೆ. ಪರಿಣಾಮ ಜನರು ಮುಂಜಾನೆ ಹಾಗೂ ಸಂಜೆ ವೇಳೆ ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಮೋಡ ಕವಿದ ವಾತಾವರಣ, ತೇವಾಂಶಯುಕ್ತ ಗಾಳಿಯಿಂದಾಗಿ ದಿನವಿಡೀ ಚಳಿಯ ಅನುಭವವಾಗುತ್ತಿದೆ.
ಶನಿವಾರ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ತಾಪಮಾನ ಕುಸಿದಿತ್ತು. ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ ಐದರಿಂದ ಆರು ಡಿಗ್ರಿ ಕುಸಿದಿದ್ದು, 22.6 ಡಿಗ್ರಿ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ, ಕಳೆದ ವಾರ ಸರಾಸರಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.