ಪುದುಚೇರಿ: ಪಿಂಕ್ ಕಲರ್ ನಲ್ಲಿ ಹತ್ತಿಯಂತೆ ಮೃದುವಾಗಿರುವ ಬಾಂಬೆ ಮಿಠಾಯಿಯನ್ನು ಚಪ್ಪರಿಸಿಕೊಂಡು ತಿನ್ನುತ್ತೀರಾ? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ.
ಬಾಂಬೆ ಮಿಠಾಯಿಯನ್ನು ಇಷ್ಟಪಡದವರು ಯಾರು ಹೇಳಿ? ಚಿಕ್ಕವರಿಂದ ಹಿಡಿದು ವಯೋವೃದ್ಧರಿಗೂ ಇದು ತುಂಬಾ ಇಷ್ಟ. ಆದರೆ ಈ ಚಾಕಲೇಟ್ ನಮ್ಮ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂದು ನಾವು ಯೋಚಿಸುವುದೂ ಇಲ್ಲ. ರಸ್ತೆ ಬದಿಯಲ್ಲಿ ಸಿಗುವ ಈ ಸಿಹಿತಿನಿಸನ್ನು ಸೇವಿಸುವ ಮೊದಲು ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಿ.
ಪುದುಚೇರಿಯಲ್ಲಿ ಬಾಂಬೆ ಮಿಠಾಯಿಗೆ ನಿಷೇಧ
ಬಾಂಬೆ ಮಿಠಾಯಿ ಅಥವಾ ಕಾಟನ್ ಕ್ಯಾಂಡಿಯನ್ನು ಪುದುಚೇರಿಯಲ್ಲಿ ನಿಷೇಧ ಮಾಡಲಾಗಿದೆ. ಇದರಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ರೊಡಮೈನ್-ಬಿ ಎಂಬ ವಿಷಕಾರೀ ಅಂಶ ಪತ್ತೆಯಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿನ ಆರೋಗ್ಯಾಧಿಕಾರಿಗಳು ಬಾಂಬೆ ಮಿಠಾಯಿಗೆ ನಿಷೇಧ ಹೇರಿದ್ದಾರೆ. ಪುದುಚೇರಿಯಾದ್ಯಂತ ಇನ್ನು ಮುಂದೆ ಇಂತಹ ಬಾಂಬೆ ಮಿಠಾಯಿ ಮಾರಾಟ ಮಾಡುವಂತಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ತಮಿಳು ಸಾಯಿ ಸುಂದರರಾಜನ್ ಹೇಳಿದ್ದಾರೆ.
ಆದರೆ ಆಹಾರ ಇಲಾಖೆಯ ಗುಣಮಟ್ಟ ಪ್ರಮಾಣ ಪತ್ರ ಪಡೆದ ಮಾರಾಟಗಾರರು ಮಾರಾಟ ಮಾಡಬಹುದಾಗಿದೆ. ಹೀಗಾಗಿ ಪುದುಚೇರಿಯಲ್ಲಿ ಇನ್ನು ಕಾಟನ್ ಕ್ಯಾಂಡಿ ಮಾರಾಟ ಮಾಡುವುದಿದ್ದರೆ ಅದಕ್ಕೆ ಆಹಾರ ಇಲಾಖೆಯಿಂದ ಗುಣಮಟ್ಟದ ಪ್ರಮಾಣ ಪತ್ರ ಪಡೆದು ಮಾರಾಟ ಮಾಡಬೇಕಾಗುತ್ತದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗವರ್ನರ್ ತಿಳಿಸಿದ್ದಾರೆ.
ರೊಡಮೈನ್ ಬಿ ಎಂದರೇನು?
ರೊಡಮೈನ್ ಬಿ ರಾಸಾಯನಿಕ ಸಂಯುಕ್ತವಾಗಿದ್ದು ಅದು ಆಹಾರಕ್ಕೆ ಬಣ್ಣ ನೀಡಲು ಸಹಾಯ ಮಾಡುತ್ತದೆ. ಇದು ಮನುಷ್ಯರಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಇದನ್ನು ಬಳಸಿದ ಆಹಾರ ಸೇವಿಸುವುದರಿಂದ ಅಂಗಾಂಶಗಳ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಉಂಟು ಮಾಡಬಹುದು. ಇದನ್ನು ಸುದೀರ್ಘ ಕಾಲ ಬಳಸುವುದರಿಂದ ಪಿತ್ತಜನಕಾಂಗದ ಕ್ಯಾನ್ಸರ್ ನಂತಹ ಮಾರಕ ರೋಗ ಬರಬಹುದು. ಹೀಗಾಗಿ ಬಾಯಲ್ಲಿಟ್ಟರೆ ಕರಗುವ ಈ ಸಿಹಿತಿನಿಸನ್ನು ಮಕ್ಕಳಿಗೆ ಮಾತ್ರವಲ್ಲ, ನೀವೂ ಈ ತಿನ್ನುವ ಮೊದಲು ಈ ವಿಚಾರ ನೆನಪಿನಲ್ಲಿರಲಿ.