ನವದೆಹಲಿ: ಇಂದು ಲೋಕಸಭೆಯಲ್ಲಿ ನೀಟ್ ಅಕ್ರಮದ ವಿಚಾರ ಆಡಳಿತ ಪಕ್ಷ ಮತ್ತು ವಿಪಕ್ಷ ನಾಯಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಈ ನಡುವೆ ನೀಟ್ ಅಕ್ರಮದ ವಿಚಾರದ ಬಗ್ಗೆ ಮಾತನಾಡಲು ಹೊರಟಾಗ ರಾಹುಲ್ ಗಾಂಧಿ ಮೈಕ್ ಆಫ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನೀಟ್ ಅಕ್ರಮದ ವಿಚಾರವಾಗಿ ಕಾಂಗ್ರೆಸ್ ರಚನಾತ್ಮಕ ಚರ್ಚೆ ನಡೆಸಲು ಉದ್ದೇಶಿಸಿತ್ತು. ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಈ ಬಗ್ಗೆ ಕಾಂಗ್ರೆಸ್ ಚರ್ಚೆ ಮಾಡಲು ಬಯಸಿದರೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಅದನ್ನು ಸದನದಲ್ಲಿ ಪ್ರಸ್ತಾಪಿಸಲು ಹೊರಟಾಗ ವಿಪಕ್ಷ ನಾಯಕನ ಮೈಕ್ ಆಫ್ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಆರೋಪಿಸಿದ್ದಾರೆ.
ನೀಟ್ ಅಕ್ರಮದ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ತಾರಕಕ್ಕೇರಿದಾಗ ಸ್ಪೀಕರ್ ಓಂ ಬಿರ್ಲಾ ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಇಂದು ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯ ಕೈಗೊಳ್ಳಲು ಸಮಯ ನಿಗದಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಇಂದು ಇತರ ವ್ಯವಹಾರಗಳನ್ನು ಅಮಾನತುಗೊಳಿಸಿ ನೀಟ್ ಸಮಸ್ಯೆಗಳ ಬಗ್ಗೆ ತಕ್ಷಣ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಕೋರಿತು. ಆದರೆ ಇದಕ್ಕೆ ಸ್ಪೀಕರ್ ಓಂ ಬಿರ್ಲಾ ಅವಕಾಶ ಕೊಡಲಿಲ್ಲ.
ಈಗ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಪ್ರಕ್ರಿಯೆ ಅಷ್ಟೇ ನಡೆಯಲಿದೆ ಎಂದರು. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ಈ ವೇಳೆ ಗದ್ದಲದ ವಾತಾವರಣವುಂಟಾಯಿತು. ನೀಟ್ ವಿಚಾರವಾಗಿ ಗೌರವಯುತವಾಗಿ ಚರ್ಚೆಯಾಗಬೇಕು ಎಂದು ನಾವು ಬಯಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು.