Publish Date: Mon, 02 Sep 2024 (19:48 IST)
Updated Date: Mon, 02 Sep 2024 (19:58 IST)
ಮುಂಬೈ: ಮಸೀದಿಗೆ ನುಗ್ಗು ಹೊಡೆಯುತ್ತೇವೆ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ಕುಮಾರ್ ರಾಣೆ ವಿರುದ್ಧ ದೂರು ದಾಖಲಾಗಿದೆ.
ಅಹಮ್ಮದ್‌ನಗರ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಹಾಂತ ರಾಮಗಿರಿ ಮಹಾರಾಜ್ ಪರವಾಗಿ ಶ್ರೀರಾಮಪುರ ಮತ್ತು ಟೋಪಖಾನಾದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಣೆ, ಸ್ವಾಮೀಜಿ ರಾಮಗಿರಿ ಮಹಾರಾಜ್ ವಿರುದ್ಧವಾಗಿ ಯಾರಾದರೂ ಏನಾದರು ಹೇಳಿಕೆ ನೀಡಿದ್ದಲ್ಲಿ ನಾವು ಮಸೀದಿ ನುಗ್ಗಿ ಒಬ್ಬೊಬ್ಬರನ್ನೇ ಹಿಡಿದು ಥಳಿಸುತ್ತೇವೆ. ಇದನ್ನು ಮನಸಿನಲ್ಲಿಟ್ಟುಕೊಳ್ಳಿ ಎಂದು ರಾಣೆ ಹೇಳಿದ್ದಾರೆನ್ನಲಾದ ವಿಡಿಯೊ ವೈರಲ್ ಆಗಿತ್ತು.
ಈ ಸಂಬಂಧ ಶ್ರೀರಾಮಪುರ ಮತ್ತು ಟೋಪಖಾನಾ ಪೊಲೀಸ್ ಠಾಣೆಯಲ್ಲಿ ರಾಣೆ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಎಐಎಂಐಎಂ ವಕ್ತಾರ ವಾರಿಸ್ ಪಠಾಣ್, ರಾಣೆಯನ್ನು ಬಂಧಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಒತ್ತಾಯಿಸಿದ್ದಾರೆ.