ಕೋಲ್ಕತ್ತ: ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ರೇಪ್ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಗೆಗೆ ದೇಶದಾದ್ಯಂತ ಖಂಡನೆ ವ್ಯಕ್ತವಾಗಿದೆ.
ಪಶ್ಚಿಮ ಬರ್ದ್‌ಮಾನ್ ಜಿಲ್ಲೆಯ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲಿನ ರೇಪ್ ಪ್ರಕರಣವನ್ನು ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ಆದರೆ, ಯುವತಿಯರು ರಾತ್ರಿ ಹೊತ್ತು ಹೊರಗೆ ಹೋಗಬಾರದು. ಇದ್ದಲ್ಲೇ ಇದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿರುವುದು ಈಗ ವಿವಾದಕ್ಕೀಡಾಗಿದೆ.
ಅದು ಖಾಸಗಿ ಕಾಲೇಜು. ಆ ಯುವತಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಮಧ್ಯರಾತ್ರಿ 12.30ಕ್ಕೆ ಅವಳು ಹೇಗೆ ಹೊರಬಂದಳು? ನನಗೆ ತಿಳಿದಿರುವಂತೆ, ಘಟನೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಏನಾಯಿತು ಎಂದು ನನಗೆ ತಿಳಿದಿಲ್ಲ. ತನಿಖೆ ನಡೆಯುತ್ತಿದೆ. ಘಟನೆಯನ್ನು ನೋಡಿ ನನಗೆ ಆಘಾತವಾಗಿದೆ. ಆದರೆ, ಖಾಸಗಿ ವೈದ್ಯಕೀಯ ಕಾಲೇಜುಗಳು ಸಹ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಯಾರನ್ನೂ ಕ್ಷಮಿಸುವುದಿಲ್ಲ... ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.