ನವದೆಹಲಿ: ವಾಯುದಾಳಿ ಸೇರಿದಂತೆ ತುರ್ತು ಸಂದರ್ಭದಲ್ಲಿ ನಾಗರಿಕರ ರಕ್ಷಣೆಗೆ ಬಳಸುವ ಸೈರನ್‌ಗಳನ್ನು ತಮ್ಮ ಕಾರ್ಯಕ್ರಮಗಳಲ್ಲಿ ಬಳಸಬಾರದು ಎಂದು ಎಲ್ಲಾ ಟಿ.ವಿ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಸಮುದಾಯ ಜಾಗೃತಿ ಅಭಿಯಾನ ಹೊರತುಪಡಿಸಿ ಇನ್ನಿತರ ಕಾರ್ಯಕ್ರಮಗಳಲ್ಲಿ ಸೈರನ್‌ಗಳನ್ನು ಬಳಸುವಂತಿಲ್ಲ ಎಂದು ಹೇಳಿದೆ. 1968ರ ನಾಗರಿಕಾ ರಕ್ಷಣಾ ಕಾಯ್ದೆಯಡಿ ಇರುವ ಅಧಿಕಾರ ಬಳಸಿ ಈ ನಿರ್ಬಂಧ ಹೇರಲಾಗಿದೆ.
ಸೈರನ್‌ಗಳ ನಿಯಮಿತ ಬಳಕೆಯು ವಾಯುದಾಳಿ ಸೈರನ್‌ಗಳ ಬಗ್ಗೆ ನಾಗರಿಕರ ಸೂಕ್ಷ್ಮತೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ದಾಳಿ ನಡೆದಾದ ಸೈರನ್ ಮೊಳಗಿಸಿದರೆ ಮಾಧ್ಯಮಗಳಲ್ಲಿ ಬರುವ ಶಬ್ದ ಎಂದು ನಾಗರಿಕರು ಅಂದುಕೊಳ್ಳುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಹಾಗೂ ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಮಾಡುವುದನ್ನು ವಿದ್ಯುನ್ಮಾನ ಮಾಧ್ಯಮಗಳು ನಿಲ್ಲಿಸಬೇಕು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸೂಚಿಸಿದ್ದಾರೆ.