ನವದೆಹಲಿ: ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸಣ್ಣ ಬದಲಾವಣೆಯಾಗಿದ್ದು, ವಯೋವೃದ್ಧರಿಗೆ ಕೇಂದ್ರ ಆರೋಗ್ಯ ಇಲಾಖೆ ಗುಡ್ ನ್ಯೂಸ್ ನೀಡಿದೆ.
ಆಯುಷ್ಮಾನ್ ಭಾರತ್ ಯೋಜನೆಯನ್ನು ಇನ್ನು 70 ವರ್ಷ ದಾಟಿದ ವಯೋವೃದ್ಧರೂ ಪಡೆಯಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಅಶ್ವಿನ್ ವೈಷ್ಣವ್ ಘೋಷಿಸಿದ್ದಾರೆ. ಇದರಿಂದ ಸುಮಾರು 4.5 ಕೋಟಿ ಕುಟುಂಬದ 6 ಕೋಟಿಗೂ ಅಧಿಕ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಈ ಯೋಜನೆಯಲ್ಲಿ 5 ಲಕ್ಷ ರೂ.ವರೆಗಿನ ಆರೋಗ್ಯ ವಿಮೆ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ಒಳಗೊಂಡ ಹಿರಿಯ ನಾಗರಿಕರಿಗೆ ಇನ್ನು ಹೊಸ ಕಾರ್ಡ್ ವಿತರಿಸಲಾಗುತ್ತದೆ. ಇದರಿಂದ ಈ ಯೋಜನೆಯ ಫಲ ಪಡೆಯಬಹುದಾಗಿದೆ ಎಂದು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಮಾಹಿತಿ ನೀಡಿದ್ದಾರೆ.
70 ವರ್ಷ ದಾಟಿದ ಹಿರಿಯ ನಾಗರಿಕರು ಕುಟುಂಬದ ಇತರೆ ಕಿರಿಯ ಸದಸ್ಯರನ್ನು ಹೊರತುಪಡಿಸಿ ವರ್ಷಕ್ಕೆ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಪಡೆಯಬಹುದಾಗಿದೆ. 70 ವರ್ಷ ದಾಟಿದ ಈಗಾಗಲೇ ಸಿಜಿಎಚ್ ಎಸ್, ಇಸಿಎಚ್ಎಸ್, ಅಥವಾ ಆಯುಷ್ಮಾನ್ ಸಿಎಪಿಎಫ್ ನಂತಹ ಆರೋಗ್ಯ ವಿಮೆ ಯೋಜನೆ ಹೊಂದಿರುವ ಫಲಾನುಭವಿಗಳು ಇದೀಗ ಇರುವ ಯೋಜನೆಯಲ್ಲೇ ಮುಂದುವರಿಯಬಹುದು ಅಥವಾ ಎಬಿ ಪಿಎಂ-ಜಯ್ ಯೋಜನೆಗೆ ಬದಲಾಯಿಸಿಕೊಳ್ಳಬಹುದು.
2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ 70 ವರ್ಷ ದಾಟಿದವರಿಗೂ ಆಯುಷ್ಮಾನ್ ಭಾರತ ಆರೋಗ್ಯ ವಿಮೆ ಸಲ್ಲುವಂತೆ ಆಗಬೇಕು ಎಂದು ಘೋಷಣೆ ಮಾಡಿದ್ದರು. ಅದನ್ನೀಗ ಕೇಂದ್ರ ಸರ್ಕಾರ ಜಾರಿಗೆ ತಂದಿದೆ.