ಮುಂಬೈ : ಮಹಾರಾಷ್ಟ್ರದ ನವನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ದರ್ಗಾದ ಬಗ್ಗೆ ಟ್ವೀಟ್ ಒಂದನ್ನು ಹಂಚಿಕೊಂಡ ಬಳಿಕ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗುರುವಾರ ಮಾಹಿಮ್ ಕರಾವಳಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ದರ್ಗಾವನ್ನು ಕೆಡವಿ ಹಾಕಿದೆ.
ರಾಜ್ ಠಾಕ್ರೆ ಅವರು ಮಾಹಿಮ್ ಕರಾವಳಿ ಪ್ರದೇಶದಲ್ಲಿ ಅನಧಿಕೃತವಾಗಿ ದರ್ಗಾವನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಡ್ರೋನ್ ಕ್ಯಾಮೆರಾದಲ್ಲಿ ತೆಗೆಯಲಾಗಿದ್ದ ದೃಶ್ಯಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಠಾಕ್ರೆ ಟ್ವೀಟ್ ಮಾಡಿದ ಕೇವಲ 1 ದಿನದ ಬಳಿಕ ಮುಂಬೈ ನಾಗರಿಕ ಮಂಡಳಿ ಅಕ್ರಮ ದರ್ಗಾವನ್ನು ನೆಲಸಮಗೊಳಿಸುವ ಕಾರ್ಯಾಚರಣೆಗೆ ಮುಂದಾಗಿದೆ.
ರಾಜ್ ಠಾಕ್ರೆ ಮಾಡಿರುವ ಟ್ವೀಟ್ನಲ್ಲಿ, ಮಾಹಿಮ್ನ ಮಗ್ದೂಮ್ ಬಾಬಾ ದರ್ಗಾವನ್ನು ಸಮುದ್ರದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿದೆ. 2 ವರ್ಷಗಳ ಹಿಂದೆ ಇಲ್ಲಿ ಏನೂ ಇರಲಿಲ್ಲ. ದರ್ಗಾ ನಿರ್ಮಾಣದ ಕಾರ್ಯಾಚರಣೆ ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದರೂ ಇದು ಪೊಲೀಸರ ಹಾಗೂ ಪುರಸಭೆಯ ಗಮನಕ್ಕೆ ಬಂದಿಲ್ಲವೇ ಎಂದು ಟೀಕಿಸಿದ್ದರು.
ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ ಪೊಲೀಸರಿಗೆ ವಾರ್ನಿಗ್ ನೀಡಿದ ರಾಜ್ ಠಾಕ್ರೆ, ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ದರ್ಗಾದ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಿ. ಈಗಲೇ ಇದನ್ನು ನೆಲಸಮಗೊಳಿಸಿ. ಇಲ್ಲದೇ ಹೋದಲ್ಲಿ ನಾವು ಆ ಪ್ರದೇಶದಲ್ಲಿ ದೊಡ್ಡ ಗಣಪತಿಯ ದೇವಾಲಯವನ್ನು ನಿರ್ಮಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.