Publish Date: Thu, 29 Mar 2018 (14:00 IST)
Updated Date: Thu, 29 Mar 2018 (14:02 IST)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮತ್ತೆ ಎರಡು ದಿನಗಳ ಕಾಲ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಮಾರ್ಚ್ 29ರಂದು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಮಿತ್ ಷಾ ಬಂದಿಳಿಯಲಿದ್ದಾರೆ.
ಮಾರ್ಚ್ 30ರಂದು ಸುತ್ತೂರು ಮಠಕ್ಕೆ ಭೇಟಿ ನೀಡಿ, ಸುತ್ತೂರು ಮಠಾಧಿಪತಿಗಳಾಗಿರುವ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಜೊತೆ ಉಭಯಕುಶಲೋಪರಿ ನಡೆಸಿ ಆಶೀರ್ವಚನ ಪಡೆದುಕೊಳ್ಳಲಿದ್ದಾರೆ.
ಬಳಿಕ ಮೈಸೂರು ಅರಮನೆಯಲ್ಲಿರುವ ರಾಜಮನೆತನದ ಖಾಸಗಿ ನಿವಾಸಕ್ಕೆ ತೆರಳಿ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.ಆನಂತರ ಕ್ಯಾತಮಾರನಹಳ್ಳಿಯಲ್ಲಿರುವ ಮೃತ ಬಿಜೆಪಿ ಕಾರ್ಯಕರ್ತ ರಾಜು ನಿವಾಸಕ್ಕೆ ಭೇಟಿ ನೀಡಲಿದ್ದಾರೆ.ನಂತರ ಕೃಷ್ಣರಾಜ, ನರಸಿಂಹರಾಜ, ಚಾಮರಾಜ ಕ್ಷೇತ್ರದ ಬಿಜೆಪಿ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ನಂತರ ದಲಿತ ಮುಖಂಡರ ನಿವಾಸಕ್ಕೆ ಭೇಟಿ ನೀಡಿ ಸಂವಾದ ನಡೆಸುವುದರ ಜೊತೆಗೆ ಮಧ್ಯಾಹ್ನದ ಭೋಜನ ಸ್ವೀಕರಿಸಲಿದ್ದಾರೆ.ಆ ಬಳಿಕ ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ.