ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಭಾರತ್ ಬ್ರ್ಯಾಂಡ್ ಯೋಜನೆಯಡಿಯಲ್ಲಿ ಕಡಿಮೆ ಬೆಲೆಗೆ ಅಕ್ಕಿ, ಗೋಧಿ ಮಾರಾಟ ಮಾಡುತ್ತಿತ್ತು. ಇದೀಗ ಮತ್ತೆ ಭಾರತ್ ಬ್ರ್ಯಾಂಡ್ ನಡಿಯಲ್ಲಿ ರಿಯಾಯಿತಿ ದರದಲ್ಲಿ ಅಕ್ಕಿ, ಗೋಧಿ ಮಾರಾಟ ಮತ್ತೆ ಒದಗಿಸಲು ಹಸಿರು ನಿಶಾನೆ ತೋರಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ನಲ್ಲಿ ರಿಯಾಯಿತಿ ದರದಲ್ಲಿ ಅಕ್ಕಿ ನೀಡಿತ್ತು. ಭಾರತ್ ಬ್ರ್ಯಾಂಡ್ ಕೇಂದ್ರದಲ್ಲಿ ಅಕ್ಕಿ ಮಾರಾಟ ಮಾಡಲಾಗಿತ್ತು. ಇದಾದ ಬಳಿಕ ಕೆಲವು ತಿಂಗಳಿನಿಂದ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟವಾಗಿರಲಿಲ್ಲ. ಇದೇ ಕಾರಣಕ್ಕೆ ಇದು ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು.
ಇದೀಗ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಭಾರತ್ ಬ್ರ್ಯಾಂಡ್ ಆಹಾರ ವಸ್ತುಗಳ ಮಾರಾಟಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಕಳೆದ ಬಾರಿ ಅಕ್ಕಿ ಪ್ರತೀ ಕೆಜಿಗೆ 29 ರೂ.ಗೆ ಮಾರಾಟ ಮಾಡಲಾಗಿತ್ತು. ಆದರೆ ಈ ಬಾರಿ 5 ರೂ. ಬೆಲೆ ಏರಿಕೆಯಾಗಿದ್ದು ಅಕ್ಕಿ ಪ್ರತೀ ಕೆ.ಜಿಗೆ 34 ರೂ.ಗಳಂತೆ ಮಾರಾಟವಾಗಲಿದೆ.
ಇನ್ನು ಗೋಧಿ ಹಿಟ್ಟು ಪ್ರತಿ ಕೆ.ಜಿಗೆ 30 ರೂ.ನಂತೆ ಮಾರಾಟವಾಗಲಿದೆ. ಎರಡೂ ವಸ್ತುಗಳು 5 ಮತ್ತು 10 ಕೆ.ಜಿ. ಪ್ಯಾಕೆಟ್ ಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಎಲ್ಲಾ ಎನ್ ಸಿಸಿಎಫ್, ನಫೇಡ್, ಇ-ಕಾಮರ್ಸ್ ಕೇಂದ್ರಗಳಲ್ಲಿ ಭಾರತ್ ಬ್ರ್ಯಾಂಡ್ ಆಹಾರ ವಸ್ತುಗಳು ಮಾರಾಟಕ್ಕೆ ಲಭ್ಯವಿರಲಿದೆ.