ನವದೆಹಲಿ: ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಸಾವನ್ನಪ್ಪಿದ ಅಸ್ಸಾಂನ ಖ್ಯಾತ ಗಾಯಕ ಜುಬಿನ್ ಗರ್ಗ್ ಅವರ ಸಾವಿಗೆ ನ್ಯಾಯ ಒದಗಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಒತ್ತಾಯಿಸಿದ್ದಾರೆ.
ಜುಬಿನ್ ಸಾವಿನ ತನಿಖೆ ಮುಕ್ತ ಮತ್ತು ನ್ಯಾಯಯುತವಾಗಿರಬೇಕು ಎಂದರು.
ಗರ್ಗ್ ಭಾರತದ ಪ್ರೀತಿಯ ಸಾಂಸ್ಕೃತಿಕ ಹೆಗ್ಗುರುತಾಗಿದ್ದು, ಅವರ ನಿಧನವು ಲಕ್ಷಾಂತರ ಅಭಿಮಾನಿಗಳ ಮೇಲೆ, ವಿಶೇಷವಾಗಿ ಅಸ್ಸಾಂ ಜನರಲ್ಲಿ ಭಾರೀ ನೋವು ತಂದಿದೆ ಎಂದರು.
ಅವರ ಸಾವಿಗೆ, ಕಾಂಗ್ರೆಸ್ ಪಕ್ಷವು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತದೆ. ಅವರ ಸಾವಿನ ತನಿಖೆ ಮುಕ್ತ ಮತ್ತು ನ್ಯಾಯಯುತವಾಗಿರಬೇಕು. ಅವರ ನಿಧನಕ್ಕೆ ಕಾರಣರಾದವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಜುಬಿನ್ ಮತ್ತು ಅವರ ಧ್ವನಿ ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿದೆ ಎಂದು ಖರ್ಗೆ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
52 ವರ್ಷದ ಜುಬಿನ್ ಗರ್ಗ್ ಅವರು 4ನೇ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಪುರಕ್ಕೆ ತೆರಳಿದ್ದಾಗ ಸೆಪ್ಟೆಂಬರ್ 19ರಂದು ಸಿಂಗಪುರದ ಸಮುದ್ರದಲ್ಲಿ ಈಜುವಾಗ ನಿಧನರಾದರು ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.