ನವದೆಹಲಿ: ದೆಹಲಿ ಅಬಕಾರಿ ಅಕ್ರಮ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಕೊನೆಗೂ ಜಾಮೀನು ಸಿಕ್ಕಿದ್ದು, ಬಿಡುಗಡೆಯ ಭಾಗ್ಯ ಬಂದಿದೆ. ಆದರೆ ಕೋರ್ಟ್ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.
ಅರವಿಂದ್ ಕೇಜ್ರಿವಾಲ್ ಕಳೆದ ನಾಲ್ಕು ತಿಂಗಳಿನಿಂದ ಬಂಧನದಲ್ಲಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಮಾತ್ರ ಪ್ರಚಾರ ದೃಷ್ಟಿಯಿಂದ ಅವರಿಗೆ ಕೆಲವು ದಿನಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಅದರ ನಡುವೆ ಅವರು ಮತ್ತೆ ಕೋರ್ಟ್ ಮುಂದೆ ಶರಣಾಗಿದ್ದರು. ಈ ನಡುವೆ ಇಡಿಯಿಂದ ಸಿಬಿಐ ಅವರನ್ನು ವಶಕ್ಕೆ ತೆಗೆದುಕೊಂಡಿತು.
ಈ ಹಿಂದೆ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದ್ದರೂ ಸಿಬಿಐ ಅದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಹೀಗಾಗಿ ಮತ್ತೆ ಅವರ ಜಾಮೀನು ರದ್ದಾಗಿ ಜೈಲು ವಾಸ ಮುಂದುವರಿದಿತ್ತು. ಇದೀಗ ಸುಪ್ರೀಂಕೋರ್ಟ್ ನ ಜಸ್ಟಿಸ್ ಉಜ್ಜಲ್ ಭೂಯಾನ್ ನೇತೃತ್ವದ ಏಕಸದಸ್ಯ ಪೀಠ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಜೊತೆಗೆ ಸಿಬಿಐ ಬಂಧನ ನ್ಯಾಯಸಮ್ಮತವಲ್ಲ ಎಂದಿದೆ. ಆದರೆ ಕೇಜ್ರಿವಾಲ್ ವಿರುದ್ಧ ನಡೆಯುತ್ತಿರುವ ತನಿಖೆ ಸರಿಯಾದ ದಿಕ್ಕಿನಲ್ಲಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಈಗ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಆದರೆ ಕೇಜ್ರಿವಾಲ್ ಸಿಎಂ ಕಚೇರಿಗೆ ಮತ್ತು ದೆಹಲಿ ಸಚಿವಾಲಯಕ್ಕೆ ಬೇಟಿ ನೀಡಬಾರದು ಎಂದು ಷರತ್ತು ವಿಧಿಸಲಾಗಿದೆ. ಜೊತೆಗೆ ಕೇಸ್ ವಿಚಾರವಾಗಿ ಯಾವುದೇ ಬಹಿರಂಗ ಹೇಳಿಕೆ ನೀಡುವಂತಿಲ್ಲ ಎಂದು ಆದೇಶಿಸಿದೆ.