Publish Date: Fri, 27 Feb 2026 (13:49 IST)
Updated Date: Fri, 27 Feb 2026 (13:54 IST)
ನವದೆಹಲಿ: ದೆಹಲಿಯಲ್ಲಿ ಮದ್ಯ ನೀತಿ ಹಗರಣದಲ್ಲಿ ಸಿಲುಕಿಕೊಂಡಿದ್ದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಕಳಂಕ ಮುಕ್ತ ಎಂದು ಕೋರ್ಟ್ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಅವರು ಕಣ್ಣೀರು ಹಾಕಿದ್ದಾರೆ.
ದೆಹಲಿಯ ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ತೆಲಂಗಾಣ ಎಂಎಲ್ಸಿ ಕೆ. ಕವಿತಾ ಸೇರಿದಂತೆ 23 ಆರೋಪಿಗಳನ್ನು ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಕಳಂಕ ಮುಕ್ತ ಮಾಡಿದೆ.
ಇದರ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರವಿಂದ್ ಕೇಜ್ರಿವಾಲ್ ಇದೊಂದು ಸುಳ್ಳು ಕೇಸ್ ಆಗಿತ್ತು. ನಾನು ಭ್ರಷ್ಟನಲ್ಲ ಎನ್ನುತ್ತಾ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಇನ್ನು ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅವರ ಪತ್ನಿ ಸುನಿತಾ ಕೇಜ್ರಿವಾಲ್, ನನ್ನ ಪತಿಯನ್ನು ಅಧಿಕಾರಕ್ಕಾಗಿ ಪಿತೂರಿ ಮಾಡಿ ಜೈಲಿಗೆ ಕಳುಹಿಸಲಾಗಿತ್ತು ಎಂದಿದ್ದಾರೆ.
ಅಬಕಾರಿ ಪ್ರಕರಣದಲ್ಲಿ ಕೇಜ್ರಿವಾಲ್ ಜೈಲು ವಾಸವನ್ನೂ ಅನುಭವಿಸಿದ್ದರು. ಮುಖ್ಯಮಂತ್ರಿಯಾಗಿದ್ದಾಗಲೇ ಅವರು ಜೈಲಿಗೆ ಹೋಗಿದ್ದರು. ಇದೀಗ ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್ 23 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಸಾಕ್ಷ್ಯಾಧಾರಗಳಿಲ್ಲದೇ ಪ್ರಕರಣ ದಾಖಲಿಸಿದ ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿದೆ.