ನವದೆಹಲಿ: ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಅರವಿಂದ್ ಕೇಜ್ರಿವಾಲ್ ಅವರೇ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ದಾರೆ.
ಕೇಜ್ರಿವಾಲ್ ನೇತೃತ್ವ ಮತ್ತು ಭ್ರಷ್ಟಾಚಾರ ಹಗರಣಗಳಲ್ಲಿ ಭಾಗಿಯಾಗಿದ್ದೇ ಆಪ್‌ನ ಕಳಪೆ ಪ್ರದರ್ಶನಕ್ಕೆ ಕಾರಣ. ಕೇಜ್ರಿವಾಲ್ ಮದ್ಯದ ಕಡೆ ಹೆಚ್ಚು ಗಮನಹರಿಸಿದ್ದರು. ಅಲ್ಲದೆ ಹಣದ ಬಲ ಹೊಂದಿದ್ದರು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಅಭ್ಯರ್ಥಿಯಲ್ಲಿ ಒಳ್ಳೆಯ ನಡವಳಿಕೆ, ಯೋಚನೆ, ಆಪಾದನೆ ರಹಿತ ಜೀವನ ಹಾಗೂ ತ್ಯಾಗ ಮನೋಭಾವವಿದ್ದರೆ ಮತದಾರರರು ಅಂತಹವರ ಮೇಲೆ ನಂಬಿಕೆಯಿಡುತ್ತಾರೆ. ಈ ವಿಚಾರವನ್ನು ಕೇಜ್ರಿವಾಲ್ ಬಳಿಯೂ ಹೇಳಿದ್ದೆ. ಆದರೆ ಅವರು ಇದರ ಬಗ್ಗೆ ಗಮನಕೊಡಲಿಲ್ಲ. ಬದಲಾಗಿ ಅವರಲ್ಲಿ ಹಣದ ಹೊಳೆಯಿದ್ದಿದ್ದರಿಂದ ಮದ್ಯದ ಕಡೆಗೆ ಗಮನಹರಿಸಿದರು. ಇದರಿಂದಲೇ ಅವರು ಕಡಿಮೆ ಮತಗಳನ್ನು ಪಡೆಯುತ್ತಿದ್ದಾರೆ ಎಂದು ದೂರಿದರು.
ರಾಜಕೀಯದಲ್ಲಿ ಆಪಾದನೆಗಳು ಬರುತ್ತದೆ. ಅದು ಸುಳ್ಳು ಎಂದು ನಾವು ಸಾಬೀತು ಮಾಡಬೇಕು ಆದರೆ ಅವರು ಆ ವಿಚಾರದ ಕಡೆಗೆ ತಲೆಹಾಕಲೇ ಇಲ್ಲ. ಸತ್ಯ ಯಾವತ್ತಿದ್ದರು ಸತ್ಯವಾಗಿರುತ್ತದೆ. ಆದ್ದರಿಂದ ನಾನು ಆ ಪಕ್ಷದಿಂದ ದೂರವಿರಬೇಕು ಎಂದು ನಿರ್ಧರಿಸಿದೆ. ಅವತ್ತಿನಿಂದ ಆಪ್‌ನಿಂದ ನಾನು ದೂರ ಇದ್ದೇನೆ ಎಂದರು.
ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಇತರ ಸಹಚರರು ಬಳಿಕ ಅಣ್ಣಾ ಹಜಾರೆ ಅವರ ವಿರೋಧದ ನಡುವೆಯೂ ಆಮ್ ಆದ್ಮಿ ಪಕ್ಷವನ್ನು ಕಟ್ಟಿದ್ದರು. ಆ ಬಳಿಕ ಚುನಾವಣೆಯಲ್ಲೂ ಗೆದ್ದು ದೆಹಲಿಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಚಳುವಳಿಯ ಲಾಭ ಪಡೆದು ರಾಜಕೀಯ ಉದ್ಧೇಶದ ಪಕ್ಷವನ್ನು ನಿರ್ಮಿಸಿದ ಬಳಿಕ ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್ ಅವರಿಂದ ಅಂತರ ಕಾಯ್ದುಕೊಂಡಿದ್ದರು.<>