ನವದೆಹಲಿ: ರೈತರ ಬಹುದಿನಗಳ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿ ಮಾಡಲಿದೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಅವರು ಈ ವಿಚಾರ ಹೇಳಿದ್ದಾರೆ. ರೈತರಿಗೆ ಎಂಎಸ್ ಪಿ ಸಮಸ್ಯೆಯ ಕುರಿತ ಪೂರಕ ಪ್ರಶ್ನೆಗಳಿಗೆ ಅವರು ಈ ಉತ್ತರ ನೀಡಿದ್ದಾರೆ. ಎಂಎಸ್ ಪಿಗೆ ಕಾನೂನು ಬೆಂಬಲ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ರೈತರು ದೆಹಲಿಯತ್ತ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದರು.
ಈ ಮೂಲಕ ರೈತರ ಬೇಡಿಕೆ ಈಡೇರಿದೆ. ರೈತರ ಎಲ್ಲಾ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ನಾನು ಈ ಮೂಲಕ ಸ್ಪಷ್ಟನೆ ನೀಡುತ್ತೇನೆ. ಇದು ಮೋದಿ ಸರ್ಕಾರದ ಭರವಸೆಯಾಗಿದೆ. ನಾವು ಸದಾ ರೈತರ ಪರವಾಗಿ ಇದ್ದೇವೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಸ್ವಾಮಿನಾಥನ್ ವರದಿ ಒಪ್ಪಲು ಸಾಧ್ಯವಿಲ್ಲ ಎಂದು ದಾಖಲೆ ಬರೆದಿದ್ದರು. ಪ್ರತಿಪಕ್ಷಗಳು ಎಂದಿಗೂ ರೈತರನ್ನು ಗೌರವಿಸಿಲ್ಲ. ರೈತರ ಬೇಡಿಕೆಯನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ ಎಂದಿದ್ದಾರೆ.