ಗೋಮಾಂಸ ಸೇವನೆ ಮತ್ತು ಸಂಗ್ರಹಿಸಿಟ್ಟ ವದಂತಿಯ ಪರಿಣಾಮ ಹತ್ಯೆಗೀಡಾದ ಇಕ್ಲಾಖ್ ಮನೆಯಲ್ಲಿದ್ದುದು ಗೋಮಾಂಸವೇ ಎಂಬುದು ಖಚಿತವಾದ ಮೇಲೆ ಸ್ವಲ್ಪ ದಿನ ತಣ್ಣಗಾಗಿದ್ದ ವಿವಾದ ಮತ್ತೆ ಭುಗಿಲೆದ್ದಿದೆ. ಗೋ ಹತ್ಯೆ ಮಾಡಿದ್ದು ಖಚಿತವಾಗಿರುವುದರಿಂದ ಅವರ ವಿರುದ್ಧ 20 ದಿನಗಳೊಳಗೆ ಕ್ರಮ ಕೈಗೊಳ್ಳಬೇಕೆಂದು ದಾದ್ರಿ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಕಳೆದ ಸಪ್ಟೆಂಬರ್ 28 ರಂದು (ಹತ್ಯೆ ನಡೆಸುವ ಮುನ್ನ) ಸಭೆ ಸೇರಿದ್ದ ಜಾಗದಲ್ಲಿಯೇ ಮತ್ತೆ ಸಭೆ ಸೇರಿದ್ದ ಬಿಸರಾ ಗ್ರಾಮಸ್ಥರು ಗೋ ಹತ್ಯೆ ಮತ್ತು ಅಕ್ಲಾಖ್ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲು ಸ್ಥಳೀಯ ಆಡಳಿತಕ್ಕೆ 20 ದಿನಗಳ ಸಮಯದ ಗಡುವು, ತಪ್ಪಿದ್ದಲ್ಲಿ ನಮ್ಮ ಆಕ್ರೋಶವನ್ನು ಹತ್ತಿಕ್ಕಲಾಗದು ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ದಾರುಣವಾಗಿ ಹತ್ಯೆಗೀಡಾದ ಮೊಹಮ್ಮದ್ ಇಕ್ಲಾಖ್ ಮನೆಯ ಫ್ರಿಜ್‌ನಲ್ಲಿದುದು ಕುರಿ ಮಾಂಸ ಅಲ್ಲ, ದನ ಅಥವಾ ಕರುವಿನ ಮಾಂಸ ಎಂದು ಮಥುರಾದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಖಚಿತಡಿಸಿದ ಕೂಡಲೇ ಬಿಸರಾ ಗ್ರಾಮಸ್ಥರು ಪೊಲೀಸರ ಬಳಿ ಅಕ್ಲಾಖ್ ಕುಟುಂಬದ ವಿರುದ್ಧ ದೂರು ದಾಖಲಿಸುವಂತೆ ಮನವಿ ಮಾಡಿದ್ದರು. ಈಗ ಆರು ದಿನಗಳ ಬಳಿಕ ಸಭೆ ಸೇರಿ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.