Publish Date: Tue, 21 Feb 2023 (12:32 IST)
Updated Date: Tue, 21 Feb 2023 (12:36 IST)
ಭುವನೇಶ್ವರ : ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಓಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ಚಂದನ್ ರಾಣಾ ಆರೋಪಿ. ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಂಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ರಾಣಾ ತನ್ನ 2ನೇ ಪತ್ನಿಯನ್ನು ನೀಲಗಿರಿ ಪ್ರದೇಶದ ಸಂತರಗಡಿಯಾದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಲು ಮಾವನ ಮನೆಗೆ ಬಂದಿದ್ದ.
ಆದರೆ ಮಹಿಳೆಯು ಆತನೊಂದಿಗೆ ಹೋಗಲು ನಿರಾಕರಿಸಿದ್ದರಿಂದ ರಾಣಾ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಈ ವೇಳೆ ಮಹಿಳೆಯ ರಕ್ಷಣೆಗೆ ಬಂದ ಆಕೆಯ ಅಕ್ಕನಿಗೂ ಆ್ಯಸಿಡ್ ಎರಚಿದ್ದಾನೆ. ದಾಳಿ ವೇಳೆ ಅಕ್ಕನ ಮಗ ಹಾಗೂ ಮಗಳು ಗಾಯಗೊಂಡಿದ್ದಾರೆ.
ಘಟನೆಯ ನಂತರ ಗಾಯಗೊಂಡ ನಾಲ್ವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಕ್ಕಳು ಹಾಗೂ ಮಹಿಳೆಯ ಸ್ಥಿತಿ ಸ್ಥಿರವಾಗಿದ್ದು, ಆರೋಪಿಯ 2ನೇ ಪತ್ನಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.