ನವದೆಹಲಿ : ನ್ಯೂಯಾರ್ಕ್ ಮೂಲದ ಹಿಂಡೆನ್ಬರ್ಗ್ ರಿಸರ್ಚ್ ಮಾಡಿದ ಆರೋಪ “ಭಾರತದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ” ಎಂದು ಅದಾನಿ ಸಮೂಹ ಖಾರವಾಗಿ ಪ್ರತಿಕ್ರಿಯಿಸಿದೆ.
ತನ್ನ ವಿರುದ್ಧ “ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ” ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅದಾನಿ ಸಮೂಹ 413 ಪುಟಗಳ ದೀರ್ಘ ಉತ್ತರವನ್ನು ಪ್ರಕಟಿಸಿದೆ.
ಇದು ಯಾವುದೇ ನಿರ್ದಿಷ್ಟ ಕಂಪನಿಯ ಮೇಲೆ ಕೇವಲ ನಡೆಸಿದ ದಾಳಿಯಲ್ಲ. ಇದು ಭಾರತ, ಭಾರತೀಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ ಮತ್ತು ಗುಣಮಟ್ಟ ಮತ್ತು ಭಾರತದ ಬೆಳವಣಿಗೆಯ ಕಥೆ ಮತ್ತು ಮಹತ್ವಾಕಾಂಕ್ಷೆ ಮೇಲೆ ನಡೆಸಿದ ದಾಳಿ ಎಂದು ತಿರುಗೇಟು ನೀಡಿದೆ.
ಯಾವುದೇ ವಿಶ್ವಾಸಾರ್ಹತೆ ಅಥವಾ ನೈತಿಕತೆಯಿಲ್ಲದೆ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಕಂಪನಿಯ ಹೇಳಿಕೆಗಳು ನಮ್ಮ ಹೂಡಿಕೆದಾರರ ಮೇಲೆ ಗಂಭೀರವಾದ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಿದೆ ಎಂದು ಅದಾನಿ ಗ್ರೂಪ್ ಹೇಳಿದೆ.