ಕಡಲೂರ್: ರೈಲಿನಲ್ಲಿ ಶೌಚಾಲಯ ಬಳಸುವ ವೇಳೆ ಗರ್ಭಿಣಿಯೊಬ್ಬರು ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ತಮಿಳುನಾಡಿನ ಉಳಂದೂರುಪೇಟ್ ಹಾಗೂ ವಿರುಧಾಚಲಂ ನಡುವೆ ಶುಕ್ರವಾರ ನಡೆದಿದೆ.
ಮೃತ ಗರ್ಭಿಣಿಯನ್ನು ತಿರುಸಲಂ ಮೂಲದ ಕಸ್ತೂರಿ (22) ಎಂದು ಗುರುತಿಸಲಾಗಿದೆ. ತೆಂಕಾಶಿಯಲ್ಲಿ ಸೀಮಂತ ಕಾರ್ಯಕ್ಕೆಂದು ಪತಿ ಸುರೇಶ್ ಹಾಗೂ ಸಂಬಂಧಿಕರ ಜತೆ ತೆರಳುತ್ತಿದ್ದ ವೇಳೆ ಕೊಲ್ಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ಸಂಭವಿಸಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವಾಂತಿಯಾಗುತ್ತಿದ್ದ ವೇಳೆ ಶೌಚಾಲಯ ಬಳಸಲು ಹೋಗಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದಿದ್ದು ಉಳಂದೂರುಪೇಟ್‌ನಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಕಸ್ತೂರಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.