ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಗುಡಿಸಲಿನ ಹೊರಗೆ ಮಲಗಿದ್ದ 8 ವರ್ಷದ ಮಗುವೊಂದನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ ವರದಿಯಾಗಿದೆ. ದೆಹಲಿ ಹೊರವಲಯದ ಕಿರಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಶನಿವಾರ ಮುಂಜಾನೆ ಈ ಘಟನೆ ನಡೆದಿದ್ದು ಮನೆ ಮುಂದೆ ಹಾಕಲಾಗಿದ್ದ ಮಂಚದ ಮೇಲೆ ಮಲಗಿದ್ದ ಮಗುವನ್ನು ಯುವಕನೊಬ್ಬ ಎತ್ತಿಕೊಂಡು ಹೋಗುತ್ತಿರುವ ದೃಶ್ಯಾವಳಿ ಸಮೀಪದ ಕಟ್ಟಡವೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿ ಸಹ ಅಪ್ರಾಪ್ತ ಎಂದು ಊಹಿಸಲಾಗಿದ್ದು ಮಗುವನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅತ್ಯಾಚಾರವೆಸಗಿದ್ದಾನೆ.
ಬಳಿಕ ಮಗುವನ್ನು ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ನಡೆದ ಬಳಿಕ ಸಾವರಿಸಿಕೊಂಡು ಎದ್ದ ಬಾಲಕಿ ಮನೆಗೆ ಮರಳಿ ಅದೇ ಮಂಚದ ಮೇಲೆ ಮಲಗಿದ್ದಾಳೆ.
ಮಗಳು ಮಲಗಿದ್ದ ಹಾಸಿಗೆ ರಕ್ತಮಯವಾಗಿದ್ದನ್ನು ಕಂಡ ಆಕೆಯ ತಾಯಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಮಗುವನ್ನು ಪರೀಕ್ಷಿಸಿದ ವೈದ್ಯರಿಗೆ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಗಿದೆ. ತಕ್ಷಣ ಅವರು ಅಮನ್ ವಿಹಾರ್ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಆಪ್ತ ಸಮಾಲೋಚನೆ ಸಂದರ್ಭದಲ್ಲಿ ಬಾಲಕಿ ಎಲ್ಲ ವಿಷಯವನ್ನು ಹೊರ ಹಾಕಿದ್ದಾಳೆ.
ಐಪಿಸಿ ವಿಭಾಗ 363( ಅಪಹರಣ) ಮತ್ತು 376( ಅತ್ಯಾಚಾರ) ಮತ್ತು ಪೋಸ್ಕೋ ಕಾಯಿದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು ಸಿಸಿ ಕ್ಯಾಮರಾ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.