ಪ್ರಧಾನಮಂತ್ರಿ ನರೇಂದ್ರ ಮೋದಿ ಶೆಹನ್‌ಶಾ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೆ ನೀಡಿರುವ ಬಗ್ಗೆ ವಾಗ್ದಾಳಿ ನಡೆಸಿದ ಬಿಜೆಪಿ, ಚಾಯಿವಾಲಾ ಪ್ರಧಾನಿಯಾಗಿರುವುದು ಸೋನಿಯಾ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗುಡುಗಿದೆ.
ಸೋನಿಯಾ ಗಾಂಧಿ ಶೆಹನ್‌ಶಾ ಅಂದರೆ ಅರ್ಥವೇನು ಎನ್ನುವ ಬಗ್ಗೆ ವಿವರಣೆ ನೀಡಬೇಕು. ಕಳೆದ ಒಂದು ದಶಕದಿಂದ ಅಧಿಕಾರ ನಡೆಸುವಾಗ ತೋರಿದಂತೆ ವರ್ತನೆಗೆ ಶೆಹನ್‌ಶಾ ಎನ್ನುತ್ತಾರೆಯೇ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತಿರುಗೇಟು ನೀಡಿದ್ದಾರೆ.
ಶೆಹನ್‌ಶಾ ಎಂದರೆ ದೇಶ ಮತ್ತು ಪಕ್ಷವನ್ನು ತನ್ನ ಸ್ವಂತದ್ದು ಎಂದು ಭಾವಿಸುವ ವ್ಯಕ್ತಿ. ಗಾಂಧಿ ಕುಟುಂಬವನ್ನು ಶೆಹನ್‌ಶಾ ಕುಟುಂಬ ಎಂದು ಕರೆಯಬಹುದು. ಕಳೆದ ಹಲವು ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ದೇಶವನ್ನು ತನ್ನ ಸ್ವಂತ ದೇಶ ಎಂದು ಭಾವಿಸಿದೆ ಎಂದು ಕಿಡಿಕಾರಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲು ಕಾರಣರಾದರು. ಅದು ಶೆಹನ್‌ಶಾ ವರ್ತನೆ ಅಲ್ಲವೇ? ಅದೊಂದು ರಾಜರ ಅಡಳಿತವಾಗಿತ್ತೆ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಡಕುಟುಂಬದಿಂದ ಕಠಿಣ ಪರಿಶ್ರಮದಿಂದ ಜನತೆಯ ಆಶೀರ್ವಾದದಿಂದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಚಾಯಿವಾಲಾ ಪ್ರಧಾನಿ ಹುದ್ದೆಗೆ ಏರಿರುವುದು ಜನತೆಯ ಆಶೀರ್ವಾದದಿಂದ ಎನ್ನುವುದನ್ನು ಕಾಂಗ್ರೆಸ್ ನಾಯಕರು ಮರೆಯಬಾರದು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಕಿವಿಮಾತು ಹೇಳಿದ್ದಾರೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.