ಬೆಂಗಳೂರು, ಸೆ 09 : ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್ನ ಆರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆಯನ್ನು ಖಾಯಂಗೊಳಿಸಿ ಆದೇಶ ಹೊರಡಿಸಿದೆ. ಇತ್ತೀಚೆಗೆ ಹೈಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆದಿದ್ದರು. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಕೊಲಿಜಿಯಂ ಮಾಡಿದ ಶಿಫಾರಸು ಅಂಗೀಕರಿಸಿರುವ ಕೇಂದ್ರ ಕಾನೂನು ಸಚಿವಾಲಯ ಈ ಕುರಿತು ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿಯಾಗಿದ್ದ ಬಿ. ವಿ. ನಾಗರತ್ನ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿಯನ್ನು ಪಡೆದಿದ್ದರು.
ಕನ್ನಡಿಗರಾದ ಬಿ. ವಿ. ನಾಗರತ್ನ ಅವರು ಆಗಸ್ಟ್ 31ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸೇವಾ ಹಿರಿತನದ ಆಧಾರದ ಮೇಲೆ ಸೆಪ್ಟೆಂಬರ್ 2027ರಲ್ಲಿ ಅವರು ಸುಪ್ರೀಂಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶವಿದೆ.
ಸೆಪ್ಟೆಂಬರ್ನಲ್ಲಿ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಕೊಲಿಜಿಯಂ ಕರ್ನಾಟಕದ 6 ನ್ಯಾಯಮೂರ್ತಿಗಳು ಸೇರಿದಂತೆ ಒಟ್ಟು 12 ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಲು ಶಿಫಾರಸು ಮಾಡಿತ್ತು. ಇವರಲ್ಲಿ ಇಬ್ಬರು ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾರೆ.
ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ಹೈಕೋರ್ಟ್ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡುವತ್ತ ಗಮನಹರಿಸಿದೆ. ದೇಶದ 25 ಹೈಕೋರ್ಟ್ಗಳಲ್ಲಿ ಸುಮಾರು 450 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ ಕೆಲವು ದಿನಗಳ ಹಿಂದೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜು ಭೇಟಿಯಾಗಿದ್ದರು. ದೇಶದ ಹೈಕೋರ್ಟ್ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡುವುದು ತಮ್ಮ ಆದ್ಯತೆ ಎಂದು ಹೇಳಿದ್ದರು.
ಸೆಪ್ಟೆಂಬರ್ ತಿಂಗಳಿನಲ್ಲಿ ಹೈಕೋರ್ಟ್ಗಳಲ್ಲಿ ಖಾಲಿ ಇರುವ ಶೇ 90ರಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ತಮ್ಮ ಮಾತಿನಂತೆ ಮುಖ್ಯ ನ್ಯಾಯಮೂರ್ತಿಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದಾರೆ.