ನವದೆಹಲಿ : ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ರೈತರು 'ಮಹಾಪಂಚಾಯತ್' ನಡೆಸಿದ ಒಂದು ದಿನದ ಪ್ರತಿಭಟನೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರು 'ನಿರ್ಭೀತರು' ಹಾಗೂ 'ದೃಢಸಂಕಲ್ಪ'ವುಳ್ಳವರು ಆಗಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಈ ರೈತರು ನಿರ್ಭೀತರಾಗಿದ್ದಾರೆ. ಅವರು ದೃಢಸಂಕಲ್ಪ ಹೊಂದಿದ್ದಾರೆ. ಅವರು ಭಾರತದ ಹಣೆಬರಹ ಬದಲಿಸಬಲ್ಲವರಾಗಿದ್ದಾರೆ" ಎಂದಿದ್ದಾರೆ.
ಭಾನುವಾರದ ಮಹಾಪಂಚಾಯತ್ನ ಪ್ರತಿಭಟನೆಯ ಫೋಟೋವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ ಮತ್ತು ಟ್ವೀಟ್ನಲ್ಲಿ ರೈತರು ಪ್ರತಿಭಟನೆಯ ಹ್ಯಾಶ್ಟ್ಯಾಗ್ ಅನ್ನು ಬಳಸಿದ್ದಾರೆ.
ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಭಾನುವಾರ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಬೃಹತ್ ಮಹಾಪಂಚಾಯತ್ ನಡೆಸಲಾಯಿತು.
ರೈತರಿಗೆ ಬೆಂಬಲ ನೀಡಿದ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ, ಅವರು "ಮಹಾಪಂಚಾಯತ್ನ ಯಶಸ್ಸಿನ ಕ್ರೆಡಿಟ್ ಪಡೆಯಲು "ಹಳೆಯ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.
"ರಾಹುಲ್ ಗಾಂಧಿ ಅವರು ಹಳೆಯ ಚಿತ್ರವನ್ನು ಬಳಸಿಕೊಂಡು ಮಹಾಪಂಚಾಯತ್ ಯಶಸ್ಸಿನ ಕ್ರೆಡಿಟ್ ಪಡೆಯಲು ಯತ್ನಿಸಿದ್ದಾರೆ. ಇದು 'ರೈತ' ಆಂದೋಲನ ಕೆಲಸ ಮಾಡಿಲ್ಲ ಎಂಬುದನ್ನು ತೋರಿಸುತ್ತದೆ." ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವೀಟ್ ಮಾಡಿದ್ದಾರೆ.