ಉತ್ತರ ಕಾಶ್ಮೀರದ ಉರಿ ಪಟ್ಟಣದ ಬಳಿಯಿರುವ ಸೇನಾ ಕಚೇರಿ ಮೇಲೆ ಭಾನುವಾರ ಉಗ್ರರು ನಡೆಸಿದ ದಾಳಿಯಲ್ಲಿ ಮೃತರಾದ 17 ಸೈನಿಕರಲ್ಲಿ ಮೂವರು ಬಿಹಾರದವರಾಗಿದ್ದಾರೆ.
ಈ ಮೂವರ ಪಾರ್ಥಿವ ಶರೀರಗಳನ್ನು ತವರಿಗೆ ರವಾನಿಸಲಾಗಿದ್ದು ಇಂದು ಸಂಜೆಯೊಳಗೆ ಅವರ ಅಂತಿಮ ಸಂಸ್ಕಾರ ಮಾಡುವ ಸಾಧ್ಯತೆಗಳಿವೆ.
ಮೃತರನ್ನು ಸೆಪೊಯ್ ರಾಕೇಶ್ ಸಿಂಗ್ ( ಕೈಮುರ್ ಜಿಲ್ಲೆ ಬಡ್ಡ್ಜಾ ಗ್ರಾಮ) , ನಾಯ್ಕ್ ಎಸ್‌ಕೆ ವಿದ್ಯಾರ್ಥಿ ( ಗಯಾ ಜಿಲ್ಲೆ ಬೊಕನಾರಿ ಗ್ರಾಮ) ಮತ್ತು ಭೋಜ್ಪುರ ಜಿಲ್ಲೆಯ ರಕ್ತು ಗ್ರಾಮದ ಹವಿಲ್ದಾರ್ ಅಶೋಕ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕಂಡ ಅತ್ಯಂತ ಘೋರ ದಾಳಿ ಎನ್ನಿಸಿಕೊಂಡಿರುವ ಈ ದುರ್ಘಟನೆಯ ಸುದ್ದಿ ಹಬ್ಬುತ್ತಿದ್ದಂತೆ ಬಿಹಾರದ ಈ ಮೂರು ಹಳ್ಳಿಗಳಲ್ಲಿ ರೋಧನ ಮುಗಿಲು ಮುಟ್ಟಿದೆ.
ವಿದ್ಯಾರ್ಥಿ ತಂದೆ ಮಥುರಾ ಯಾದವ್ ಮತ್ತು ತಾಯಿ ಕುಂತಿ ದೇವಿ ಶೋಕ ಕಲ್ಲು ಹೃದಯವನ್ನು ಸಹ ಕಲಕುವಂತಿದೆ. ಅಶೋಕ್ ಕುಮಾರ್, ರಾಕೇಶ್ ಮನೆಯ ಕಥೆಯೂ ಅಷ್ಟೇ. ಆತನ ಸ್ನೇಹಿತರು, ಸಂಬಂಧಿಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ನಿನ್ನೆ ಕಾಶ್ಮೀರದ ಉರಿ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ 17 ಯೋಧರು ಮತ್ತು ನಾಲ್ವರು ಉಗ್ರರು ಹತರಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಇಂದು ಮತ್ತೆ ಮೂವರು ಹುತಾತ್ಮರಾಗಿದ್ದಾರೆ. ಸೇನಾ ಕಚೇರಿಯೊಳಗೆ ಮತ್ತೆ ಮೂವರು ಉಗ್ರರು ಇರಬಹುದೆಂದು ಭಾವಿಸಲಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ.
ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ