Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿರುವ ಈ ಗಿರಿಧಾಮ ಬಗ್ಗೆ ನಿಮಗೆಷ್ಟು ಗೊತ್ತು...!

ಕರ್ನಾಟಕದಲ್ಲಿರುವ ಈ ಗಿರಿಧಾಮ ಬಗ್ಗೆ ನಿಮಗೆಷ್ಟು ಗೊತ್ತು...!

ಗುರುಮೂರ್ತಿ

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (17:50 IST)
ಸುತ್ತಲೂ ಹಸಿರು ತಣ್ಣಗೆ ಮೈಕೊರೆವ ಚಳಿ, ತಂಪಾದ ಗಾಳಿಯ ಜೊತೆಗೆ ಎತ್ತನೋಡಿದರತ್ತ ಮಂಜು ಅಲ್ಲಲ್ಲಿ ಕೂಗುವ ಹಕ್ಕಿಗಳ ಕೂಗು, ಆಗತಾನೇ ಉದಯಿಸೋ ಸೂರ್ಯ ಅದೆಲ್ಲೋ ಗೀಳಿಡುವ ಪ್ರಾಣಿಗಳ ಶಬ್ದ ಇವನ್ನೆಲ್ಲಾ ನೀವು ಅನುಭವಿಸಬೇಕು ಎಂದು ಬಯಸಿದರೆ, ಕರ್ನಾಟದಲ್ಲಿರುವ ಈ ಪ್ರದೇಶಕ್ಕೆ ನೀವು ಭೇಟಿ ನೀಡಲೇಬೇಕು. ಹೌದು ಪಕೃತಿಯ ಸೊಬಗು ಸವಿಯುತ್ತಾ ನಿಮ್ಮ ಪ್ರಯಾಣವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುವ ಉತ್ತಮ ಪ್ರವಾಸಿತಾಣ ಇದಾಗಿದ್ದು, ನೀವು ಒಂದು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇ ಆದಲ್ಲಿ ನೀವು ಆ ಪ್ರವಾಸದ ಆ ನೆನಪನ್ನು ಎಂದಿಗೂ ಮರೆಯಲಾರಿರಿ.
ಕುದುರೆಮುಖ
 
ಈ ಪರ್ವತವು ಕುದುರೆಯ ಮುಖದ ಹಾಗೆ ಇರುವ ಕಾರಣ ಇದಕ್ಕೆ ಕುದುರೆಮುಖ ಎನ್ನುವ ಹೆಸರು ಬಂದಿದೆ. ಇದು ಪಶ್ಚಿಮ ಘಟ್ಟವಾಗಿದ್ದು ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿದೆ. ಇದು ಸಮುದ್ರ ಮಟ್ಟದಿಂದ 1894 ಮೀಟರ್ (6214 ಅಡಿ) ಎತ್ತರದಲ್ಲಿದ್ದು ಸುಂದರವಾದ ಪರ್ವತ ಶ್ರೇಣಿಯನ್ನು ಹೊಂದಿದೆ. ಈ ಸುಂದರ ಗಿರಿಧಾಮ ಚಿಕ್ಕಮಗಳೂರಿನಲ್ಲಿದ್ದು, ಈ ಪರ್ವತದ ಪಶ್ಚಿಮಕ್ಕೆ 95 ಕಿಮೀ. ದೂರದಲ್ಲಿ ಅರಬ್ಬಿ ಸಮುದ್ರವಿದೆ. ಅದನ್ನು ಬೆಟ್ಟದ ಮೇಲಿಂದ ಕಾಣಬಹುದು.
 
ಈ ಗಿರಿಧಾಮವು ಸೂತ್ತಲು ಹಸಿರಿನಿಂದ ಕೂಡಿದೆ. ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಅಲ್ಲಲ್ಲಿ ಸಿಗುವ ಕಿರಿದಾದ ದಾರಿಗಳಲ್ಲಿ ಸಾಗುವಾಗ ಕಂಡುಬರುವ ಚಿಕ್ಕ ಜರಿ, ತೊರೆಗಳು ಪ್ರವಾಸಿಗರಿಗೆ ಇನ್ನಷ್ಟು ಪ್ರಯಾಣದ ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ಸುತ್ತಲೂ ಕಾಣುವ ಹಸಿರು ಹುಲ್ಲು ಗಿಡಮರಗಳು, ಚಿಲಿಪಿಲಿ ಕೂಗುವ ಪಕ್ಷಿ ಸಂಕುಲ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಮಣ್ಣು ತುಂಬಾ ವಿಶೇಷವಾಗಿದ್ದು ಈ ಪ್ರದೇಶವು ಟ್ರೆಕ್ಕಿಂಗ್ ಮಾಡಲು ಉತ್ತಮವಾಗಿದೆ. ಈ ಪ್ರದೇಶದಲ್ಲಿ ಕಬ್ಬಿಣದ ಅದಿರು ಹೆಚ್ಚಿನ ಪ್ರಮಾಣದಲ್ಲಿದ್ದು ನೀವು ಕಬ್ಬಿಣ ಅದಿರಿನ ಕಾರ್ಖಾನೆಗಳನ್ನು ನೋಡಬಹುದು. ಇದು ಪ್ರೇಮಿಗಳಿಗೆ, ನವ ವಿವಾಹಿತರು ಹಾಯಾಗಿ ಸಮಯವನ್ನು ಕಳೆಯಲು ಉತ್ತಮ ಸ್ಥಳವಾಗಿದೆ.
 
ಕುದುರೆಮುಖದಲ್ಲಿ ನೋಡಲೇಬೇಕಾದ ಸ್ಥಳಗಳು 
 
ಪರ್ವತದ ಅಂಚು
webdunia
ಕುದುರೆಮುಖ ಪರ್ವತಾರೋಹಿಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಬೆಟ್ಟದ ತುದಿಯನ್ನು ನೋಡದೇ ನಿಮ್ಮ ಪ್ರವಾಸ ಪೂರ್ಣಗೊಳ್ಳದು. ಇಲ್ಲಿಗೆ ಹೋಗಲು ಸಾಕಷ್ಟು ಟ್ರೆಕ್ಕಿಂಗ್ ದಾರಿಗಳಿದ್ದು, ಅದರ ಹೊರತಾಗಿ ಬೇರೆ ಪರ್ವತದ ತುದಿಗಳನ್ನು ತಲುಪಲು ಬೇರೆ ಬೇರೆ ದಾರಿಗಳಿವೆ. ಇಲ್ಲಿಗೆ ಪ್ರಯಾಣಿಸುವಾಗ ಅಗತ್ಯವಾದ ವಸ್ತುಗಳನ್ನು ಸುರಕ್ಷತೆಯ ಸಾಧನಗಳನ್ನು ತೆಗೆದುಕೊಂಡು ಹೋಗುವುದು ಸೂಕ್ತ. ಅಷ್ಟೇ ಅಲ್ಲ ಚಾರಣಿಗರಿಗೆ ಅನುಕೂಲವಾಗುವಂತೆ ಹಲವಾರು ತಂಗುದಾಣಗಳನ್ನು ಈ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು 'ಕೆರೆಕಟ್ಟೆ', ಹಾಗೂ 'ನವೂರ್ ಅರಣ್ಯದ ರೆಸ್ಟ್ ಹೌಸ್‌ಗಳು ಉತ್ತಮವಾಗಿವೆ.
 
ಕುದುರೆಮುಖ ನ್ಯಾಷನಲ್ ಪಾರ್ಕ್
webdunia
ಕುದುರೆಮುಖದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಆಗಿರುವ ಕುದುರೆಮುಖ ನ್ಯಾಷನಲ್ ಪಾರ್ಕ್‌ ನೋಡಲು ಸುಂದರವಾಗಿದೆ. ಈ ಪ್ರದೇಶದಲ್ಲಿ ಸಾಂಬಾರ್, ಹುಲಿ ಬಾಲದ ಅಳಿಲು, ಹಂದಿ, ಹುಲಿ, ಸೀಳುನಾಯಿಗಳು ಮತ್ತು ಚಿರತೆಗಳು ಇವೆ. ಸಂಪೂರ್ಣ ನ್ಯಾಷನಲ್‌ ಪಾರ್ಕ್‌ ಅನ್ನು ತಿರುಗಾಡಲು ಪ್ರವಾಸಿಗರಿಗೆ ವಿಶೇಷ ಪರವಾನಗಿ ಅಗತ್ಯವಿರುತ್ತದೆ. ಈ ರಾಷ್ಟ್ರೀಯ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ಥಳೀಯ ಬಸ್‌ಗಳು, ಆಟೋಗಳ ಸೇವೆಗಳು ಲಭ್ಯವಿರುತ್ತದೆ. ಇದರ ಮೂಲಕ ನೀವು ಸುಲಭವಾಗಿ ಪಾರ್ಕ್ ಅನ್ನು ತಲುಪಬಹುದಾಗಿದೆ.
 
ಹನುಮಾನ್ ಗುಂಡಿ ಫಾಲ್ಸ್
webdunia
ಭೋರ್ಗರೆವ ಈ ಜಲರಾಶಿಯನ್ನು ನೋಡುವುದೇ ಕಣ್ಣಿಗೆ ಆನಂದ ದೂರದಿಂದ ಈ ದೃಶ್ಯವನ್ನು ನೋಡುತ್ತಾ ಹತ್ತಿರ ಸಾಗಿದಂತೆಲ್ಲ ರೋಮಾಂಚನವಾಗುವುದು. 100 ಅಡಿ ಎತ್ತರದಿಂದ ಬಂಡೆಗಳಿಂದ ನಡುವೆ ಧುಮುಕುವ ಈ ಫಾಲ್ಸ್ ನೈಸರ್ಗಿಕವಾಗಿ ರಚಿತವಾಗಿದ್ದು ನೋಡುಗರನ್ನು ತನ್ನ ಸೌಂದರ್ಯ ರಾಶಿಯಿಂದಲೇ ಸೆರೆಹಿಡಿಯುತ್ತದೆ. 100 ಅಡಿ ಎತ್ತರದಿಂದ ಬೀಳುವ ನೀರು ಬಂಡೆಗಳಿಗೆ ಬಡಿಯುತ್ತಾ ಚದುರಿ ಮಂಜಿನ ಹನಿಗಳಾಗಿ ಹಾಲಿನಂತೆ ಧುಮುಕುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಮಲೆಗಾಲದಲ್ಲಿ ಅಬ್ಬರಿಸುವ ಈ ಫಾಲ್ಸ್ ಉಳಿದ ಸಮಯದಲ್ಲಿ ಮಂದವಾಗಿರುತ್ತದೆ. ಕಾಡಿನ ಸವಿಯನ್ನು ಸವಿದು ದಣಿವಾರಿಸಿಕೊಳ್ಳಲು ಈ ಹನುಮಾನ್ ಗುಂಡಿ ಫಾಲ್ಸ್ ಉತ್ತಮ ಸ್ಥಳವಾಗಿದೆ.
 
ಗಂಗಾಮೂಲಾ
webdunia
ಪಶ್ಚಿಮಘಟ್ಟಕ್ಕೆ ಹೊಂದಿಕೊಂಡೇ ಇರುವ ಈ ಗಂಗಮೂಲ ಒಂದು ಚಾರಣ ಪ್ರದೇಶವಾಗಿದ್ದು ಸಮುದ್ರ ಮಟ್ಟಕ್ಕಿಂತ 1458 ಮೀಟರ್ ಎತ್ತರದಲ್ಲಿದೆ. ಈ ಪ್ರದೇಶ ಚಾರಣ ಮಾಡಲು ಉತ್ತವಾಗಿದ್ದು ಈ ಪ್ರದೇಶದಲ್ಲಿ ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳು ಉದ್ಭವಿಸುತ್ತವೆ. ಇದರ ಸುತ್ತಮುತ್ತಲೂ ದಟ್ಟ ಅರಣವಿದ್ದು, ಇಲ್ಲಿ ನೀವು ಚಾರಣಕ್ಕೆ ಹೋಗುವುದಾದರೆ ಅಗತ್ಯ ವಸ್ತುಗಳನ್ನು ಒಯ್ಯುವುದು ಸೂಕ್ತ. 
 
ಲಕ್ಯಾ ಡಾಮ್
webdunia
ಶೃಂಗೇರಿಯಿಂದ 40 ಕಿಮೀ. ದೂರದಲ್ಲಿರುವ ಲಕ್ಯಾ ಡಾಮ್ ಕುದುರೆಮುಖದಿಂದ 2 ಕಿಮೀ. ದೂರದಲ್ಲಿದೆ. ಇದು ಭದ್ರ ನದಿಯ ಉಪನದಿಯಾದ ಲಕ್ಯಾ‌ಗೆ ಕಟ್ಟಿರುವ ಆಣೆಕಟ್ಟಾಗಿದ್ದು, ಈ ಡ್ಯಾಮ್ 100 ಮೀ ಎತ್ತರವಿದೆ. ಇದನ್ನು ಕುದುರೆಮುಖ ಐರನ್ ಓರೆ ಕಂಪನಿ ನಿರ್ಮಿಸಿದ್ದು ಗಣಿಗಾರಿಕೆ ಕಾರ್ಯಾಚರಣೆಗಳಿಂದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಣೆ ಮಾಡುವುದು ಈ ಅಣೆಕಟ್ಟಿನ ಪ್ರಮುಖ ಉದ್ದೇಶವಾಗಿತ್ತು. ಆದರೆ ಈ ಡ್ಯಾಮ್ ಅರಣ್ಯ ಪ್ರದೇಶದಲ್ಲಿರುವುದರಿಂದ 2005 ರಲ್ಲಿ ಅದಿರು ಕಂಪನಿಯನ್ನು ಮುಚ್ಚಲಾಯಿತು. ಈಗ ಇದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು ಸೋಮವಾರದಿಂದ ಶನಿವಾರ ಬೆಳಿಗ್ಗೆ 4.30 ರಿಂದ ಸಂಜೆ 6.30 ರವರೆಗೆ ಹಾಗೂ ರವಿವಾರದಂದು ಬೆಳಿಗ್ಗೆ 9.30 ರಿಂದ ಸಂಜೆ 6.30ರ ವರೆಗೆ ಭೇಟಿ ನೀಡಬಹುದಾಗಿದೆ.
 
ಜನತಾ ಮಾರ್ಕೆಟ್
ಕುದುರೆಮುಖ ಎಂಬ ಸುಂದರ ಪಟ್ಟಣದ ಮಾರುಕಟ್ಟೆ ಪ್ರದೇಶ ಇದಾಗಿದ್ದು, ಕುದುರೆಮುಖದಲ್ಲಿ ಬೆಳೆಯುವ ಮತ್ತು ಅಲ್ಲಿ ಲಭ್ಯವಿರುವ ವಸ್ತುಗಳನ್ನು ಖರೀದಿಸಲು ಇದು ಉತ್ತಮ ಸ್ಥಳವಾಗಿದೆ. ಈ ಸ್ಥಳವನ್ನು ಮೊದಲು ಭದ್ರಾ ಮಾರುಕಟ್ಟೆ ಎಂದು ಕರೆಯುತ್ತಿದ್ದು ಇಂದು ಅದು ಜನತಾ ಮಾರ್ಕೆಟ್ ಆಗಿದೆ.
 
ಹೊರನಾಡು
webdunia
ಪಶ್ಚಿಮಘಟ್ಟದ ಭದ್ರಾ ನದಿಯ ಸಾಲಲ್ಲಿ ಈ ಪೂಣ್ಯ ಕ್ಷೇತ್ರವಿದ್ದು ನೋಡಲು ನಯನಮನೋಹರವಾಗಿದೆ. ಕುದುರೆಮುಖದಿಂದ ಸುಮಾರು 29 ಕಿಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ದೇವಸ್ಥಾನವು ಪ್ರಮುಖ ಆಕರ್ಷಣೆಯಾಗಿದೆ. ಇದು ಪುರಾತನವಾದ ದೇವಸ್ಥಾನವಾಗಿದ್ದು ಸುಂದರವಾದ ಪ್ರಾಂಗಣವನ್ನು ಹೊಂದಿದೆ. ಈ ದೇವಾಲಯವು ನೋಡಲು ತುಂಬಾ ಸುಂದರವಾಗಿದ್ದು, ದೇವಿ ಅನ್ನಪೂರ್ಣೇಶ್ವರಿಯು ಶ್ರೀಚಕ್ರ, ಚಕ್ರ, ಶಂಖ ಮತ್ತು ದೇವಿ ಗಾಯತ್ರಿಯನ್ನು ತನ್ನ ನಾಲ್ಕು ಹಸ್ತಗಳಲ್ಲಿ ಹಿಡಿದಿರುವ ಸುಂದರ ಬಂಗಾರದ ಮೂರ್ತಿಯನ್ನು ನೀವು ಇಲ್ಲಿ ಕಾಣಬಹುದಾಗಿದೆ. ಹಲವು ಶತಮಾನಗಳ ಹಿಂದೆ ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಈ ದೇವಾಲಯದಲ್ಲಿ ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ಇಲ್ಲಿ ಅನ್ನ ಸಂತರ್ಪಣೆಯು ಇದ್ದು ಹೊರನಾಡಿಗೆ ಹೋಗದೇ ಕುದುರೆಮುಖ ಪ್ರವಾಸ ಪೂರ್ತಿಯಾಗದು.
 
ಸಾಗಲು ದಾರಿ
ಕುದುರೆಮುಖ ಬೆಂಗಳೂರಿನಿಂದ 332.8 ಕಿಮೀ ದೂರದಲ್ಲಿದ್ದು ಸುಮಾರು 7 ಗಂಟೆ ಪ್ರಯಾಣವಾಗಿದೆ. ಚಿಕ್ಕಮಗಳೂರಿನಿಂದ ಹೋಗುವುದಾದರೆ ಕುದುರೆಮುಖವು 107 ಕಿಮೀ ದೂರದಲ್ಲಿದ್ದು, ಇಲ್ಲಿಂದ ಸಾಕಷ್ಟು ಬಸ್‌ ವ್ಯವಸ್ಥೆ ಲಭ್ಯವಿದೆ. ಅಲ್ಲದೇ ಕುದುರೆಮುಖದಿಂದ ಹತ್ತಿರದ ಪ್ರವಾಸಿ ಸ್ಥಳಗಳಿಗೆ ಹೋಗಲು ಸ್ಥಳೀಯ ಜೀಪುಗಳು ಬಾಡಿಗೆಗೆ ಲಭ್ಯವಿದೆ.
 
ಒಟ್ಟಿನಲ್ಲಿ ನಿಮ್ಮ ಸಂಗಾತಿಯೊಡನೆ, ಸ್ಮೇಹಿತರೊಡನೆ ಅಥವಾ ಕುಟುಂಬದವರೊಡನೆ ನೀವು ಪ್ರವಾಸ ಮಾಡಲು ಬಯಸಿದಲ್ಲಿ ಇದು ಉತ್ತಮ ಸ್ಥಳವಾಗಿದ್ದು, ವೈಲ್ಡ್‌‌ಲೈಫ್ ಫೋಟೋಗ್ರಾಫಿ ಪ್ರಿಯರು ಮತ್ತು ಚಾರಣ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿದೆ ಚಿಕ್ಕ ತಿರುಮಲ ನಿಮಗೆ ಗೊತ್ತೇ...!