Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಹತ್ತಿರವಿರುವ ಪಿಕ್‌ನಿಕ್ ತಾಣಗಳು...!

webdunia

ಗುರುಮೂರ್ತಿ

ಬೆಂಗಳೂರು , ಸೋಮವಾರ, 29 ಜನವರಿ 2018 (17:30 IST)
ಬೆಂಗಳೂರು ವಾಸಿಗಳಿಗೆ ವಿಕೆಂಡು ಬಂತು ಎಂದರೆ ಸಾಕು ಏನೋ ಒಂದು ತರಹದ ಖುಷಿ. ವೀಕೆಂಡುಗಳಲ್ಲಿ ಸ್ನೇಹಿತರೊಟ್ಟಿಗೋ ಇಲ್ಲವೇ ಕುಟುಂಬದವರೊಂದಿಗೆ ಸಿಕ್ಕ ಅಲ್ಪ ಅವಧಿಯಲ್ಲೇ ಎಲ್ಲಿಯಾದರೂ ಸುತ್ತಾಡಿಕೊಂಡು ದಿನನಿತ್ಯದ ಜಂಜಾಟದಿಂದ ಕೊಂಚ ಮಟ್ಟಿಗೆ ರಿಲೆಕ್ಸ್ ಹೊಂದಬೇಕು ಎನ್ನುವುದು ಎಲ್ಲರ ಆಸೆ ಕೂಡಾ,

ಆದರೆ ಅವರಿಗಿರುವ ಕಡಿಮೆ ಅವಧಿಯಲ್ಲಿ ಅದು ಸಾಧ್ಯವಾಗುವುದಿಲ್ಲ. ಬೆಂಗಳೂರಿನ ಸಮೀಪವೇ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕೆಂದು ನೀವು ಬಯಸಿರಬಹುದು, ಆದರೆ ಸಮಯದ ಅಭಾವದ ಕಾರಣ ಎಲ್ಲಿ ಹೋಗಬಹುದು ಎನ್ನೋ ಯೋಚನೆಯಲ್ಲಿ ನೀವಿದ್ರೆ, ಈ ವರದಿ ನಿಮಗೆ ಉಪಯೋಗವಾಗಬಹುದು. ನೀವು ಈ ಪ್ರದೇಶಗಳನ್ನು ಕೇವಲ 2 ರಿಂದ 3 ಗಂಟೆಗಳಲ್ಲಿ ಪ್ರಯಾಣಿಸಬಹುದುದಾಗಿದೆ.
 
ಸಾವನದುರ್ಗ ಬೆಟ್ಟ
ಬೆಂಗಳೂರಿನಿಂದ ಸುಮಾರು 33 ಕಿಮೀ. ದೂರ ಸಾಗಿದರೆ ಸಿಗುವುದೇ ಸಾವನದುರ್ಗ. ಈ ಪ್ರದೇಶಕ್ಕೆ ಮಾಗಡಿ ರಸ್ತೆಯ ಮೂಲಕವು ಸಾಗಬಹುದಾಗಿದೆ. ಈ ಪ್ರದೇಶವು ಟ್ರಕ್ಕಿಂಗ್ ತಾಣವಾಗಿದ್ದು, ಸಾವನದುರ್ಗ ಬೆಟ್ಟವು ಪ್ರಪಂಚದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ 1226 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಈ ಬೆಟ್ಟವನ್ನು ಕರಿಗುಡ್ಡ ಅಂತಲು ಕರಿಯುತ್ತಾರೆ. ಈ ಬೆಟ್ಟದ ಬುಡದಲ್ಲಿ ಸಾವಂಡಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನವಿದ್ದು, ಪ್ರಸಿದ್ಧವಾಗಿದೆ. ವಾರಾಂತ್ಯದಲ್ಲಿ ಈ ಸ್ಥಳಕ್ಕೆ ಸಾಕಷ್ಟು ಜನರು ಸಹ ಬರುತ್ತಾರೆ. ಇದು ಟ್ರಕ್ಕಿಂಗ್ ಪ್ರಿಯರಿಗೆ ಉತ್ತಮ ತಾಣವಾಗಿದ್ದು, ಬೆಟ್ಟದ ಮೇಲಿಂದ ನಿಂತು ನೋಡಿದರೆ ಬೆಟ್ಟದ ಸುತ್ತಮುತ್ತಲಿನ ಕಾಡಿನ ಸುಂದರ ದೃಶ್ಯವನ್ನು ಸವಿಯಬಹುದು. ಇದು ಫೋಟೋಗ್ರಾಫಿಗೂ ಸಹ ಉತ್ತಮ ಸ್ಥಳವಾಗಿದೆ.
 
ದೊಡ್ಡ ಆಲದ ಮರ 
webdunia
ಬೆಂಗಳೂರಿನಿಂದ ಸುಮಾರು 25 ಕಿಮೀ. ದೂರದಲ್ಲಿರುವ ಈ ಪ್ರದೇಶವನ್ನು ದೊಡ್ಡ ಆಲದ ಮರ ಎಂದು ಕರೆಯುತ್ತಾರೆ. ಇದು ಒಂದು ದಿನದ ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ತಾಣವಾಗಿದ್ದು, ನೀವು ಈ ಪ್ರದೇಶದಲ್ಲಿ ಸುಮಾರು 400 ವರ್ಷಕ್ಕಿಂತಲು ಹಳೆಯದಾದ ಮರಗಳನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿನ ತಂಪಾದ ಗಾಳಿ ಮತ್ತು ಆಹ್ಲಾದಕರ ವಾತಾವರಣ ನೋಡುಗರಿಗೆ ನೆಮ್ಮದಿಯನ್ನು ನೀಡುತ್ತದೆ. ಈ ಸ್ಥಳಕ್ಕೆ ನೀವು ಭೇಟಿ ನೀಡಬೇಕು ಎಂದೆನಿಸಿದರೆ ಅಕ್ಟೋಬರ್‌ನಿಂದ ಮಾರ್ಚ್ ಉತ್ತಮ ಸಮಯವಾಗಲಿದೆ.
 
ಚಿಕ್ಕಬಳ್ಳಾಪುರ
webdunia
ಬೆಂಗಳೂರಿನಿಂದ ಸುಮಾರು 58 ಕಿಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಐತಿಹಾಸಿಕ ಮತ್ತು ಮಾನವ ನಿರ್ಮಿತ ಅನೇಕ ಪ್ರೇಕ್ಷಣೀಯ ಸ್ಥಳಗಳು ಹೊಂದಿದೆ. ಈ ಪ್ರದೇಶದಲ್ಲಿ ಹಲವಾರು ಐತಿಹಾಸಿಕ ದೇವಸ್ಥಾನಗಳಿದ್ದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೇ ಚಿಕ್ಕಬಳ್ಳಾಪುರ ಪಟ್ಟಣದಿಂದ ಸುಮಾರು 12 ಕಿ.ಮೀ. ದೂರದಲ್ಲಿ ವಿವೇಕಾನಂದ ಜಲಪಾತವಿದ್ದು ಮಳೆಗಾಲದಲ್ಲಿ ಅದರ ಅಂದವನ್ನು ನೋಡಲು ಜನರು ಮುಗಿಬಿಳುತ್ತಾರೆ. ವಿಜಯನಗರ ಕಾಲದ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿರುವ ವಿಷ್ಣು ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಕಪ್ಪು ಕಲ್ಲಿನಲ್ಲಿ ವಿಶೇಷ ಚಿತ್ರಗಳೊಂದಿಗೆ ಕೆತ್ತಲ್ಪಟ್ಟ ಈ ದೇವಸ್ಥಾನವು ವಿಶೇಷವಾಗಿದೆ. ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವ ಮುದ್ದೇನಹಳ್ಳಿಯು ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳವಾಗಿದ್ದು ಇಲ್ಲಿ ವಿಶ್ವೇಶ್ವರಯ್ಯನವರು ವಾಸಿಸುತ್ತಿದ್ದ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಅಲ್ಲದೇ ಚಿತ್ರಾವತಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ, ಎಲ್ಲೋಡೆ ಶ್ರೀ ಲಕ್ಷ್ಮೀ ಆದಿನಾರಾಯಣ ದೇವಸ್ಥಾನ ಮತ್ತು ಕಂದಾವರ ಕೆರೆ ಇಲ್ಲಿನ ಪ್ರಮುಖ ಆಕರ್ಷಣೆ ಆಗಿದೆ.
 
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
webdunia
ಬೆಂಗಳೂರಿನಿಂದ ಸುಮಾರು 36 ಕಿಮೀ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ನೋಡಲು ತುಂಬಾ ಆಕರ್ಷಣಿಯವಾಗಿದ್ದು ವನ್ಯಜೀವಿಗಳ ವೈವಿಧ್ಯತೆಯನ್ನು ನೀವಿಲ್ಲಿ ಆನಂದಿಸಬಹುದು. ಫೋಟೋಗ್ರಾಫಿ ಮಾಡುವವರಿಗೆ ಈ ಸ್ಥಳವು ಉತ್ತಮವಾಗಿದ್ದು ಹೈಕಿಂಗ್, ಟ್ರೆಕ್ಕಿಂಗ್ ಅನ್ನು ಸಹ ನೀವು ಇಲ್ಲಿ ಮಾಡಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿ ಸಫಾರಿ ಡ್ರೈವ್‌ಗೆ ಹೋಗುವ ಮೂಲಕ ಕಾಡಿನ ಪ್ರಾಣಿಗಳನ್ನು ಹತ್ತಿರದಿಂದ ನೀವು ನೋಡಬಹುದಾಗಿದೆ. ಅಲ್ಲದೇ ಇಲ್ಲಿ ಪ್ರಾಣಿ ಸಂಗ್ರಹಾಲಯವಿದ್ದು ವೈವಿಧ್ಯಮಯ ಪ್ರಾಣಿಸಂಕುಲಗಳನ್ನು ನೀವು ಇಲ್ಲಿ ವೀಕ್ಷಿಸಬಹುದಾಗಿದೆ.
 
ನಂದಿ ಬೆಟ್ಟ
webdunia
ಬೆಂಗಳೂರಿನಿಂದ ಸುಮಾರು 62 ಕಿಮೀ. ದೂರದಲ್ಲಿರುವ ನಂದಿ ಬೆಟ್ಟ ಪ್ರೇಮಿಗಳ ಪಾಲಿನ ಸ್ವರ್ಗವೆಂದೇ ಹೇಳಬಹುದು. ಈ ಪ್ರದೇಶಕ್ಕೆ ಮುಂಜಾನೆ 6 ಗಂಟೆಯಲ್ಲಿ ಬೀಳುವ ಇಬ್ಬನಿ ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತದೆ. ನಂದಿಬೆಟ್ಟ ಸಮುದ್ರಮಟ್ಟದಿಂದ 4851 ಅಡಿ (1478 ಮೀ) ಎತ್ತರದಲ್ಲಿದ್ದು ಮುಂಜಾನೆಯಲ್ಲಿ ಮೋಡಗಳು ನಿಮ್ಮ ಪಕ್ಕದಲ್ಲಿಯೇ ಚಲಿಸುವುದನ್ನು ನೀವು ಇಲ್ಲಿ ನೋಡಬಹುದಾಗಿದೆ. ಇಲ್ಲಿ ಸೂರ್ಯೋದಯ ಮತ್ತು ಸುರ್ಯಾಸ್ತಮಾನವನ್ನು ನೀವು ಇತರ ಸ್ಥಳಗಳಿಗಿಂತ ಭಿನ್ನವಾಗಿ ಕಾಣಬಹುದಾಗಿದೆ. ಇಲ್ಲಿ ಊಟೋಪಚಾರಕ್ಕೆ ಎಲ್ಲಾ ರೀತಿಯ ವ್ಯವಸ್ಥೆಯಿದ್ದು ಪುರಾತನ ದೇವಸ್ಥಾನಗಳನ್ನು ನೀವು ಕಾಣಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ವೇದಿಕೆ ಮೇಲೆ ಜೆಕೆ ಕಣ್ಣೀರು ಹಾಕಿದ್ದು ನೋಡಿ ಕಿಚ್ಚ ಸುದೀಪ್ ಕಣ್ಣೀರು!