Select Your Language

Notifications

webdunia
webdunia
webdunia
webdunia

ಚಾರಣ ಪ್ರಿಯರು ಇಲ್ಲಿ ಭೇಟಿ ನೀಡಲೇಬೇಕು...!

webdunia

ಗುರುಮೂರ್ತಿ

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (17:05 IST)
ನೀವು ಚಾರಣ ಪ್ರಿಯರೇ ನಿಮಗೆ ಕಾಡು ಮೇಡು ಅಲೆದು ಜರಿತೊರೆಗಳಲ್ಲಿ ಮಿಂದೆದ್ದು ಗಿರಿಶಿಖರಗಳನ್ನು ಹತ್ತುವ ಹವ್ಯಾಸ ನಿಮಗಿದೆಯೇ ಹಾಗಾದರೆ ಈ ಸ್ಥಳ ನಿಮ್ಮೆಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಲು ಉತ್ತಮವಾಗಿದೆ. ಅಂದು ಎಲ್ಲಿದೆ ಹೇಗಿದೆ ಅನ್ನೋ ಸಂಕ್ಷಿಪ್ತ ವಿವರ ನಿಮಗಾಗಿ.
ಕುಮಾರ ಪರ್ವತ ನೆಟ್ಟಿಗರು ಈ ಸ್ಥಳವನ್ನು ಹೆಚ್ಚಾಗಿ ಕೇ.ಪಿ ಅಂತಾ ಕರೆಯುತ್ತಾರೆ. ಇದು ಚಾರಣ ಮಾಡಲು ಉತ್ತಮ ಸ್ಥಳವಾಗಿದ್ದು ಲಕ್ಷಾಂತರ ಜನರು ಇಲ್ಲಿಗೆ ಚಾರಣಕ್ಕಾಗಿ ಬರುತ್ತಾರೆ. ಕುಮಾರ ಪರ್ವತವು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿಯಲ್ಲಿ ಬರುವ ಪ್ರದೇಶವಾಗಿದ್ದು ಚಾರಣಕ್ಕೆ ಬರುವವರು ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ದರ್ಶನವನ್ನು ಸಹ ಮಾಡಬಹುದು.
 
ಇದು ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಪ್ರದೇಶವಾಗಿದ್ದು ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಶಿಖರಕ್ಕೆ ಒಮ್ಮೆ ನೀವು ಚಾರಣ ಹೋದಲ್ಲಿ ಮತ್ತೆ ಮತ್ತೆ ಹೋಗಬೇಕು ಎಂದೆನಿಸುವ ಅದ್ಭುತ ತಾಣ ಎಂದೇ ಹೇಳಬಹುದು. ಈ ಪರ್ವತವು ಸಮುದ್ರ ಮಟ್ಟದಿಂದ 1712 ಮೀಟರ್‌ಎತ್ತರದಲ್ಲಿದ್ದು ಮುಗಿಲೆತ್ತರದಲ್ಲಿನ ಆನಂದವನ್ನು ಕಣ್ತುಂಬಿಕೊಳ್ಳಲು ಇದು ಪ್ರದೇಶವು ಉತ್ತವಾಗಿದೆ. ಈ ಶಿಖರಕ್ಕೆ ಚಾರಣ ಮಾಡಲು ಸುಮಾರು 13 ಕಿಮೀ. ನಡೆಯಬೇಕಾಗುತ್ತದೆ. ಕುಕ್ಕೆ ಸುಬ್ರಮಣ್ಯದ ಕಡೆಯಿಂದ ನೀವು ಪ್ರಯಾಣ ಬೆಳೆಸಿದರೆ ಸುಮಾರು 4 ರಿಂದ 5 ಕಿಮೀ ಗಳಷ್ಟು ದಟ್ಟವಾದ ಅರಣ್ಯದಲ್ಲಿ ನೆಡೆಯಬೇಕಾಗುತ್ತದೆ. ಇದು ಸ್ವಲ್ಪ ಕಷ್ಟಕರವಾಗಿದ್ದರು ಚಾರಣಿಕರಿಗೆ ಈ ಪ್ರಯಾಣ ಹೊಸ ರೀತಿಯ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲವಾದಲ್ಲಿ ಸೋಮವಾರ ಪೇಟೆಯಿಂದ ಈ ಪ್ರದೇಶಕ್ಕೆ ನೀವು ಹೋಗಲು ಬಯಸಿದರೆ 20 ಕಿಮೀ ಕ್ರಮಿಸಿ ಅಲ್ಲಿಂದ 10 ಕಿಮೀ ನೆಡೆಯಬೇಕಾಗುತ್ತದೆ. ಇದು ಕೂಡಾ ಉತ್ತಮವಾದ ದಾರಿಯಾಗಿದ್ದು ಚಾರಣದ ಅನುಭವವನ್ನು ಪಡೆಯಲು ಒಂದು ಸಲ ನೀವು ಭೇಟಿ ನೀಡಲೇಬೇಕು.
 
ನೀವು ಚಾರಣಕ್ಕೆ ಹೊರಡುವಾಗ ನಿಮಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ನೀವು ಸುಬ್ರಮಣ್ಯ ಹತ್ತಿರವಿರುವ ದಾರಿಯಿಂದ ಚಾರಣಕ್ಕೆ ಹೊರಟರೆ, ಸ್ವಲ್ಪ ದೂರದಲ್ಲಿ ನೆಡೆದರೆ ಮೊದಲಿಗೆ ನಿಮಗೆ ಸಿಗುವುದು ಭೀಮನಕಲ್ಲು ಹಾಗೆಯೇ ಮುಂದಕ್ಕೆ ಸಾಗಿದರೆ ನಿಮಗೆ ಗಿರಿಗದ್ದೆ ಭಟ್ಟರ ಮನೆಯೊಂದು ಸಿಗುತ್ತದೆ. ಈ ಬೆಟ್ಟದಲ್ಲಿ ಇರುವ ಏಕೈಕ ಮನೆ ಎಂದರೆ ಇದೊಂದೇ. ನೀವು ಊಟದ ವ್ಯವಸ್ಥೆಗೆ ಹಾಗೂ ತಂಗಲು ಇದು ಸುಕ್ತವಾದ ಜಾಗವಾಗಿದದ್ದು ಮೊದಲೇ ಅವರಿಗೆ ತಿಳಿಸಿರಬೇಕಾಗುತ್ತದೆ. ಇಲ್ಲವಾದಲ್ಲಿ, ನೀವು ಅರಣ್ಯ ಇಲಾಖೆಯ ಕಚೇರಿಯಲ್ಲಿ ಅಥವಾ ಹತ್ತಿರದ ಮಂಟಪದಲ್ಲಿ ಕ್ಯಾಂಪ್ ಮಾಡಬಹುದು.
 
 
ಈ ಪ್ರದೇಶದಲ್ಲಿ ಚಾರಣ ಮಾಡಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿದ್ದು, ಅದಕ್ಕಾಗಿ ನೀವು ಚಾರಣ ಮಾಡುವ ದಾರಿಯಲ್ಲಿ ಒಂದು ತಪಾಸಣೆ ಕೇಂದ್ರವಿದೆ. ಅಲ್ಲಿ ನೀವು 200 ರೂಪಾಯಿಗಳ ಟಿಕೇಟ್ ಅನ್ನು ಖರೀದಿಸಿ ಮುಂದೆ ಸಾಗಿದರೆ ಸಣ್ಣ ಪುಟ್ಟ ಗುಂಡಿಗಳು ಕಂಡುಬರುತ್ತವೆ. ಗಿರಿಗದ್ದೆ ಭಟ್ಟರ ಮನೆಯಿಂದ ಸುಮಾರು 2 ಕಿಮೀ ಸಾಗಿದರೆ ನಿಮಗೆ ಕಲ್ಲುಚಪ್ಪರ ಎಂಬ ಸ್ಥಳ ಸಿಗುತ್ತದೆ ಅಲ್ಲಿಂದ ಮುಂದಕ್ಕೆ 2 ಕಿಮೀ ಸಾಗಿದರೆ  ಭತ್ತದ ರಾಶಿ ಎನ್ನುವ ಸ್ಥಳ ಕಂಡುಬರುತ್ತದೆ. ಇಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದು ಪರ್ವತದ ಮೇಲೆ ಫೈರ್ ಕ್ಯಾಂಪ್ ಅನ್ನು ನಿರ್ಬಂಧಿಸಲಾಗಿದೆ.
 
ಸೋಮವಾರಪೇಟೆಯಿಂದ ನೀವು ಚಾರಣಕ್ಕೆ ಹೊರಡಬೇಕು ಎಂದು ನೀವು ಅಂದುಕೊಂಡಲ್ಲಿ ಬೀಡಳ್ಳಿಗೆ ಬಸ್ಸಿನಲ್ಲಿ ಬರಬೇಕು ನಂತರ ಅಲ್ಲಿರುವ ಹೊಲ ಗದ್ದೆಗಳನ್ನು ದಾಟಿ ಮುಂದೆ ಸಾಗಿದರೆ ಒಂದು ಪುರಾತನವಾದ ಶಿವನ ದೇವಾಲಯ ನಿಮಗೆ ಕಾಣಸಿಗುತ್ತದೆ. ಈ ಶಿವನ ದೇವಾಲಯದವರೆಗೆ ಒಳ್ಳೆಯ ರಸ್ತೆಯಿದ್ದು, ಹಾಗೆಯೇ ಮುಂದೆ ಸಾಗಿದರೆ ಶಿವನ ದೇವಾಲಯದ ಹತ್ತಿರ ಪುರಾತನವಾದ ಹಾಗು ಬಹಳ ದೊಡ್ಡದಾದ ಸಂಪಿಗೆ ಮರ ಕಂಡುಬರುತ್ತದೆ. ಅಲ್ಲಿಂದ ನೀವು ಕಾಲುದಾರಿಯಲ್ಲಿ ಸುಮಾರು 10 ಕಿಮೀ. ದಟ್ಟವಾದ ಅರಣ್ಯದಲ್ಲಿ ಕ್ರಮಿಸಿದರೆ ನೀವು ಕುಮಾರ ಪರ್ವತವನ್ನು ತಲುಪಬಹುದು.
 
 
ಈ ಪ್ರದೇಶವು ತುಂಬಾ ಚಳಿಯಿಂದ ಕೂಡಿದ್ದು ಸಪ್ಟೆಂಬರ್‌ನಿಂದ ಫೆಬ್ರುವರಿಯವರೆಗೆ ಇಲ್ಲಿ ಚಾರಣ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಇಲ್ಲಿ ದಡ್ಡವಾದ ಕಾಡುಗಳಷ್ಟೇ ಅಲ್ಲ ಇಲ್ಲಿ ಬೀಸುವ ಚಳಿಗಾಳಿ ನಿಮಗೆ ರಾತ್ರಿ ತಂಗಲು ತೊಂದರೆಯನ್ನು ಉಂಟುಮಾಡಬಹುದು. ಹಾಗಾಗಿ ನೀವು ಚಳಿಯಿಂದ ರಕ್ಷಿಸಿಕೊಳ್ಳಲು ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.
 
ಕುಮಾರ ಪರ್ವತದ ಕೆಳಗಿರುವ ಕ್ಷೇತ್ರವು ಪುರಾಣ ಪ್ರಸಿದ್ಧವಾಗಿದ್ದು ಇಲ್ಲಿ ಸುಬ್ರಮಣ್ಯ ಸ್ವಾಮಿಯ ದಿವ್ಯ ಸನ್ನಿಧಾನವಿದೆ, ಈ ಸನ್ನಿಧಾನದಲ್ಲಿ ಸರ್ಪದೋಷ ನಿವಾರಣಾರ್ಥ ಮಾಡುವ ಪೂಜೆಗೆ ಇದು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ನೀವು ಚಾರಣವನ್ನು ಮುಗಿಸಿ ಈ ದಿವ್ಯ ಸನ್ನಿಧಾನದ ದರ್ಶನವನ್ನು ನೀವು ಪಡೆಯಬಹುದಾಗಿದೆ. ಅಲ್ಲದೇ ಈ ದೇವಸ್ಥಾನದಲ್ಲಿ ಮಧ್ನಾಹ್ನ ಹಾಗೂ ರಾತ್ರಿ ಎರಡು ಹೊತ್ತು ಭೋಜನದ ವ್ಯವಸ್ಥೆಯಿದ್ದು ಪ್ರವಾಸಿಗರಿಗೆ ಇದು ಅನುಕೂಲಕರವಾಗಿದೆ.
 
ಸಾಗಲು ದಾರಿ
 
ಕುಮಾರ ಪರ್ವತವು ಕುಕ್ಕೆಗೆ ಬಂದು ಅಲ್ಲಿಂದ ಕುಮಾರ ಪರ್ವತಕ್ಕೆ ತೆರಳಬೇಕಾಗುತ್ತದೆ. ಬೆಂಗಳೂರಿನಿಂದ ಕುಕ್ಕೆಯು 282 ಕಿಮೀ ಇದ್ದು, ಮೈಸೂರಿನಿಂದ 193 ಕಿಮೀ ದೂರದಲ್ಲಿದೆ. ಹಾಸನ್‌ ಮೂಲಕವೂ ಇಲ್ಲಿಗೆ ಬರಬಹುದಾಗಿದ್ದು 104 ಕಿಮೀ ಅಂತರದಲ್ಲಿದೆ. ಇಲ್ಲಿಗೆ ಬರಲು ರೈಲಿನ ವ್ಯವಸ್ಥೆಯು ಇದ್ದು ಬಸ್ಸಿನ ಮೂಲಕವು ಬರಬಹುದಾಗಿದೆ.
 
ನೀವು ಇದೇ ಮೊದಲ ಬಾರಿ ಚಾರಣ ಮಾಡುವವರಾಗಿದ್ದಲ್ಲಿ ಈ ಕುಮಾರ ಪರ್ವತ ನಿಮಗೆ ಮರೆಯಲಾರದ ನೆನಪಿನ ಬುತ್ತಿ ನೀಡುವುದರಲ್ಲಿ ಯಾವುದೇ ಹುರುಳಿಲ್ಲ. ಇಲ್ಲಿನ ಸೌಂದರ್ಯ ರಾಶಿ ಸುರ್ಯೋದಯದ ಸೊಬಗು ಮುಂಜಾನೆ ಹನಿ ಹಚ್ಚ ಹಸಿರಿನ ಬೆಟ್ಟ ಇವೆಲ್ಲದರ ಸಂಗಮ ಕುಮಾರ ಪರ್ವತವಾಗಿದ್ದು ನೀವು ಇದನ್ನೆಲ್ಲಾ ನೋಡಬೇಕು ಎಂದರೆ ಒಮ್ಮೆ ಕುಮಾರ ಪರ್ವತಕ್ಕೆ ಭೇಟಿ ನೀಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆಗುಂಬೆಯ ಪ್ರೇಮಸಂಜೆಯ....!!