ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಮೇಲೆ ಕ್ರೌರ್ಯ ನಡೆಸಿದ ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹ್ಮದ್ ನಾವೇ ಮೂರು ಹಸುಗಳನ್ನು ಕೊಡಿಸುತ್ತೇವೆ ಎಂದು ಮಾಲಿಕರಿಗೆ ಭರವಸೆ ನೀಡಿದ್ದಾರೆ.
ಚಾಮರಾಜಪೇಟೆಯಲ್ಲಿ ಕರ್ಣ ಎಂಬವರ ಹಸುಗಳ ಕೆಚ್ಚಲು ಕುಯ್ದು, ಕಾಲಿಗೆ ಮಚ್ಚಿನಿಂದ ಹಲ್ಲೆ ಮಾಡಿ ದುರುಳರು ವಿಕೃತಿ ಮೆರೆದಿದ್ದರು. ಸಂಕ್ರಾಂತಿ ಸಂದರ್ಭದಲ್ಲಿ ಗೋವುಗಳಿಗೆ ಪೂಜೆ ಮಾಡುವ ಸಂದರ್ಭದಲ್ಲೇ ಇಂತಹದ್ದೊಂದು ವಿಕೃತಿ ಮೆರೆಯಲಾಗಿತ್ತು.
ಘಟನೆ ಸಂಬಂಧ ಆರೋಪಿಗಳಲ್ಲಿ ಒಬ್ಬಾತನಾದ ನಸ್ರುದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಕುಡಿತದ ಅಮಲಿನಲ್ಲಿ ಕೃತ್ಯವೆಸಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದ. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಮೀರ್ ಅಹ್ಮದ್ ನಾನು ಮುಖ್ಯಮಂತ್ರಿಗಳು ಬಳ್ಳಾರಿಯಲ್ಲಿದ್ದಾಗ ವಿಷಯ ಗೊತ್ತಾಯಿತು. ತಕ್ಷಣವೇ ಮುಖ್ಯಮಂತ್ರಿಗಳು ಕಮಿಷನರ್ ಗೆ ಕರೆ ಮಾಡಿ ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ನಾನೂ ಪೊಲೀಸರಿಗೆ ಹೇಳಿದ್ದೇನೆ. ಈ ಕೆಲಸ ಮಾಡಿದವರು ಯಾರೇ ಆದರೂ ಕಠಿಣ ಕ್ರಮ ಅಗಬೇಕು. ಮೂರು ಹಸುಗಳನ್ನು ನಾವು ಕೊಡುತ್ತೇವೆ. ಆ ಕುಟುಂಬದ ಜೊತೆ ನಾವಿದ್ದೇವೆ. ಹಸುಗಳನ್ನು ಕೊಡಿಸುವ ಜವಾಬ್ಧಾರಿ ನಮ್ಮದು ಎಂದು ಜಮೀರ್ ಅಹ್ಮದ್ ಘೋಷಣೆ ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಅವರು ಕುಟುಂಬಸ್ಥರ ಜೊತೆಗೂ ಮಾತುಕತೆ ನಡೆಸಿದ್ದಾರೆ.