ಬಳ್ಳಾರಿ: ಉಪಚುನಾವಣೆ ಗೆಲುವಿನ ಬಳಿಕ ಇಂದು ಬಳ್ಳಾರಿಯಲ್ಲಿ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾದ ಸಚಿವ ಜಮೀರ್ ಅಹ್ಮದ್, ಹಿಂದೂಸ್ತಾನ್ ಹಮಾರಾ, ಕಾಂಗ್ರೆಸ್ ಇರೋದೇ ಬಡವರ ಸೇವೆಗಾಗಿ ಎಂದು ಎದೆತಟ್ಟಿಕೊಂಡು ಹೇಳಿದ್ದಾರೆ.
ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಏನು ಮಾಡಿದ್ರು? ಅವರದ್ದು ಒಂದಾದ್ರೂ ಸಾಧನೆ ಬಗ್ಗೆ ಹೇಳಿದ್ದಾರಾ? ಅವರು ಯಾವತ್ತೂ ಅವರ ಸಾಧನೆ ಬಗ್ಗೆ ಹೇಳಲ್ಲ. ಯಾಕೆಂದರೆ ಅವರು ಬಡವರಿಗಾಗಿ ಏನೂ ಮಾಡಲ್ಲ. ಯಾವಾಗಲೂ ಹಿಂದೂ-ಮುಸ್ಲಿಂ ಎಂದು ತಂದಿಡುವ ಕೆಲಸ ಮಾಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸುತ್ತಾರೆ ಅಷ್ಟೇ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಆದರೆ ನೀವು ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ತೆಗೆದು ನೋಡಿ. ನಾವು ಎಲ್ಲಾ ಧರ್ಮದವರನ್ನೂ ಸಮಾನರಾಗಿ ನೋಡುವವರು. ನಮ್ಮ ಸಾಧನೆ ಏನು, ಬಡವರಿಗಾಗಿ ಏನು ಮಾಡಿದ್ದೇವೆ ಎಂದು ಗೊತ್ತಾಗುತ್ತದೆ. ಕಾಂಗ್ರೆಸ್ ಇರುವುದೇ ಬಡವರಿಗಾಗಿ. ನಾವು ಯಾವತ್ತೂ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಲ್ಲ. ಸಾರೇ ಜಹಾಂ ಸೆ ಅಚ್ಚಾ, ಹಿಂದೂಸ್ತಾನ್ ಹಮಾರಾ ಎನ್ನುತ್ತೇವೆ ಎಂದು ಎದೆ ತಟ್ಟಿಕೊಂಡು ಗುಡುಗಿದ್ದಾರೆ.
ಬಿಜೆಪಿಯವರಿಗೆ ಬರೀ ಜಾತಿ ಒಂದೇ ಬೇಕಾಗಿರುವುದು. ದಯಮಾಡಿ ಇದನ್ನೆಲ್ಲಾ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಜಮೀರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಎಂದರೆ ಎಲ್ಲಾ ಜಾತಿಯವರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಪಕ್ಷ ಎಂದು ಅವರು ಹೇಳಿದ್ದಾರೆ. ಅವರು ಇಂದು ಸಂಡೂರಿನಲ್ಲಿ ನಡೆದ ಅಭಿನಂದನೆ ಸಲ್ಲಿಸುವ ಸಮಾವೇಶದಲ್ಲಿ ಮಾತನಾಡಿದ್ದಾರೆ.