ಹಾಸನ: ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ ನಡೆದಿದೆ. ಇದು ಕಳೆದ 2 ತಿಂಗಳಿನಲ್ಲಿ ನಡೆದ ನಾಲ್ಕನೇ ಸಾವಿನ ಪ್ರಕರಣವಾಗಿದೆ.
ಕಾಡಾನೆ ದಾಳಿಗೆ ಮೃತ ಮಹಿಳೆಯನ್ನು ಸುಶೀಲಮ್ಮ ಎಂದು ಗುರುತಿಸಲಾಗಿದೆ. ಭಾನುಪ್ರಕಾಶ್ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಸುಶೀಲಮ್ಮ ವಾಪಸ್ ಆಗುತ್ತಿದ್ದಾಗ ದಿಢೀರ್ ಕಾಡಾನೆಯೊಂದು ಪ್ರತ್ಯಕ್ಷವಾಗಿ ದಾಳಿ ನಡೆಸಿದೆ.
ಸುಶೀಲಮ್ಮನನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿ, ತಲೆ ಭಾಗವನ್ನು ತುಳಿದು ಸಾಯಿಸಿದೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು, ಅರೇಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಿಳೆ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಚೀಕನಹಳ್ಳಿ-ಬೇಲೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.