ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭದಲ್ಲಿ ಸರ್ಕಾರವನ್ನು ನಾನಾ ವಿಚಾರಗಳಲ್ಲಿ ತರಾಟೆಗೆ ತೆಗೆದುಕೊಳ್ಳಲು ಮುಂದಾಗಿರುವ ಬಿಜೆಪಿಗೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳೇ ಮಗ್ಗುಲ ಮುಳ್ಳಾಗಿದೆ.
ಬಿಜೆಪಿಯಲ್ಲಿ ಈಗ ಬಿವೈ ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಬಣವಾಗಿದೆ. ವಕ್ಫ್ ವಿರುದ್ಧ ಹೋರಾಟದಲ್ಲಿ ಇಬ್ಬರ ನಡುವಿನ ಮನಸ್ತಾಪ ಸ್ಪೋಟಗೊಂಡಿದ್ದು, ದೆಹಲಿ ಅಂಗಳಕ್ಕೆ ತಲುಪಿತ್ತು. ಹೈಕಮಾಂಡ್ ಇಬ್ಬರಿಗೂ ಶಿಸ್ತಿನ ಪಾಠ ಹೇಳಿದರೂ ಅಸಮಾಧಾನ ಕಡಿಮೆಯಾಗಿಲ್ಲ.
ಇದೀಗ ನಾಳೆಯಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಪ್ರತಿಪಕ್ಷಬಿಜೆಪಿ ಬಾಣಂತಿಯರ ಸಾವು, ವಕ್ಫ್ ನೋಟಿಫಿಕೇಷನ್ ಸೇರಿದಂತೆ ಹಲವು ವಿಚಾರಗಳನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಪಕ್ಷದ ನಾಯಕರೊಳಗೇ ಒಗ್ಗಟ್ಟಿನ ಕೊರತೆಯಿದ್ದು ಈ ಹೋರಾಟಕ್ಕೆ ಯಶಸ್ಸು ಸಿಗುವುದು ಕಷ್ಟವಾಗಿದೆ.
ಇತ್ತ ಬಿಜೆಪಿಯನ್ನು ಹೆಣೆಯಲು ಕೊವಿಡ್ ಹಗರಣವನ್ನು ಆಡಳಿತಾರೂಢ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದೆ. ಇದೂ ಬಿಜೆಪಿಗೆ ಕಗ್ಗಂಟಾಗಿದೆ. ಆಡಳಿತ ಪಕ್ಷ ತನ್ನ ಮೇಲೆ ಕೊವಿಡ್ ಹಗರಣದ ಆರೋಪ ಹೊರಿಸಿದರೂ ಇದಕ್ಕೆ ವಿಜಯೇಂದ್ರ ಬಣಕ್ಕೆ ಪ್ರತಿರೋಧ ನೀಡಲು ಯತ್ನಾಳ್ ಬಣದ ಬೆಂಬಲ ಸಿಗುವುದು ಅನುಮಾನವಾಗಿದೆ.