ದೇಶಾದ್ಯಂತ ಇಂದು 73ನೇ ಗಣರಾಜ್ಯೋತ್ಸವ ಸಂಭ್ರಮ.
ಇದೇ ವೇಳೆ ಡಾ. ಗಿರಿಜಾ ಅವರಿಗೆ ಈ ಬಾರಿಯ ಗಣರಾಜ್ಯೋತ್ಸವ ಹೆಚ್ಚು ಸಂಭ್ರಮದಿಂದ ಕೂಡಿದೆ. ಹೋರಾಟ ನಡೆಸಿ, ಸರ್ಕಾರಿ ಕಾರ್ಯಕ್ರಮದ ನಿರೂಪಣೆ ಗಳಿಸಿರುವ ಡಾ. ಗಿರಿಜಾ ಅವರಿಗೆ ಇಂದು ಗಣರಾಜ್ಯೋತ್ಸವ ನಿರೂಪಣೆಗೆ ಅವಕಾಶ ನೀಡಲಾಗಿದೆ.
ತಮಗೆ ಅವಕಾಶ ಕಲ್ಪಿಸುತ್ತಿಲ್ಲವೆಂದು ರೊಚ್ಚಿಗೆದ್ದಿದ್ದ ಡಾ. ಗಿರಿಜಾ ಮುಖ್ಯಮಂತ್ರಿಯ ಮನೆ ಮುಂದೆ ಏಕಾಂಗಿ ಪ್ರತಿಭಟನೆ ಸಹ ನಡೆಸಿದ್ದರು. ಕೇವಲ ಅಪರ್ಣಾ ಹಾಗೂ ಶಂಕರ್ ಪ್ರಕಾಶ್ ಅವರುಗಳಿಗೆ ಮಾತ್ರ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಣೆಗೆ ಅವಕಾಶ ನೀಡಲಾಗುತ್ತಿದೆ ಎಂಬುದು ಅವರ ಪ್ರತಿಭಟನೆಯ ಧ್ವನಿಯಾಗಿತ್ತು.
ಹಳೆಯ ನಿರೂಪಕರು ಹಾಗೂ ಗಾಯಕರಿಗೆ ಮಣೆ ಹಾಕುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಕೇವಲ ಇಬ್ಬರೇ ನಿರೂಪಕರು. ಹೀಗಾಗಿ ನಿರೂಪಕರು ಹಾಗೂ ಗಾಯಕರ ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡುವಂತೆ ಕಳೆದ ಆಗಸ್ಟ್ ತಿಂಗಳಲ್ಲಿ ಡಾ. ಗಿರಿಜಾ ಆಗ್ರಹಿಸಿದ್ದರು.
ನೇರವಾಗಿ ಶಂಕರ್ ಪ್ರಕಾಶ್ ಹಾಗೂ ಅಪರ್ಣಾ ವಿರುದ್ದ ಅಸಮಾಧಾನ ಹೊರ ಹಾಕಿದ್ದ ನಿರೂಪಕಿ ಗಿರಿಜಾ, ಹತ್ತಾರು ವರ್ಷದಿಂದ ಅವರೇ ನಿರೂಪಕರಾಗಿದ್ದಾರೆ. ಸರ್ಕಾರ ಬದಲಾಗುತ್ತೆ, ಸಚಿವರು ಬದಲಾಗ್ತಾರೆ, ಆದ್ರೆ ಸರ್ಕಾರಿ ಕಾರ್ಯಕ್ರಮದ ನಿರೂಪಕರು ಬದಲಾಗಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಜಿಲ್ಲಾಡಳಿತ, ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಪ್ರತಿಷ್ಠಿತ ಕಾರ್ಯಕ್ರಮದ ನಿರೂಪಣೆಗೆ ಡಾ. ಗಿರಿಜಾ ಅವರಿಗೆ ಅವಕಾಶ ಕಲ್ಪಿಸಿದೆ.