Publish Date: Thu, 31 Mar 2022 (14:06 IST)
Updated Date: Thu, 31 Mar 2022 (14:08 IST)
ಬೆಂಗಳೂರು : ಚಪ್ಪಲಿ ಏಟು ತಿನ್ನಬಹುದು. ಆದರೆ ದುಡ್ಡೇಟು ತಿನ್ನಲಿಕ್ಕೆ ಆಗಲ್ಲ. ನೂರು ಬಾರಿ ಚಪ್ಪಲಿಯಲ್ಲಿ ಪಟ ಪಟ ಪಟ ಅಂತ ಹೊಡೆದರೂ ತಿನ್ನಬಹುದು.
ಆದರೆ ದುಡ್ಡಿನ ಏಟು ತಿನ್ನಲು ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ನಾಯಕರುಗಳು ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಾಗ್ದಾಳಿ ನಡೆಸಿದ ಡಿಕೆಶಿ, ಬೆಲೆ ಏರಿಕೆ ಗಗನಕ್ಕೆ ಹೋಗಿದೆ. ಆದಾಯ ಪಾತಾಳಕ್ಕೆ ಹೋಗಿದೆ. ಇವತ್ತಿಗೆ ಆರ್ಥಿಕ ವರ್ಷದ ಲೆಕ್ಕಾಚಾರ ಮುಗಿದಿದೆ. ಹೀಗಾಗಿ ಇವತ್ತೇ ಈ ಪ್ರತಿಭಟನೆ ಮಾಡಿದ್ದೇವೆ ಎಂದರು.
ದಿನಾ ಪಿಕ್ ಪಾಕೆಟ್ ಆಗುತ್ತಿದೆ. ಗ್ಯಾಸ್ ಸಿಲಿಂಡರ್, ಬೈಕ್ ಕಾರಿಗೆ ಹಾರ ಹಾಕಿ ಪೂಜೆ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದೇವೆ. ಜನರ ನೋವನ್ನು ಬಿಜೆಪಿ ವಿರುದ್ಧ ಮತ ಹಾಕಿ, ಬಿಜೆಪಿ ಸರ್ಕಾರ ಕಿತ್ತೆಸೆಯುವ ಮೂಲಕ ಕಳೆಯಬೇಕು ಎಂದು ಕಿಡಿಕಾರಿದರು.