ವಿಜಯಪುರ: ಇಸ್ಪೀಡ್ ಅಡ್ಡೆಗೆ ದಾಳಿ ಮಾಡಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ತೆಪ್ಪ ಮುಳುಗಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಲ್ಹಾರ ಸಮೀಪ ಬಳೂತಿ ಜಾಕ್ ವೆಲ್‌ನಲ್ಲಿ ನಡೆದಿದೆ.
ಘಟನೆ ಹಿನ್ನೆಲೆ: ಮಂಗಳವಾರ ಸಂಜೆ ಏಳೆಂಟು ಮಂದಿ ಕೂಡಿಕೊಂಡು ಕೃಷ್ಣಾ ನದಿ ತೀರದ ಬಳೂತಿ ಜಾಕ್ ಬಳಿ ಇಸ್ಪೀಡ್ ಆಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಯಲ್ಲಿದ್ದ ತೆಪ್ಪ ಏರಿದ್ದಾರೆ. ಒಂದೇ ತೆಪ್ಪದಲ್ಲಿ 5 ಮಂದಿ ಹತ್ತಿದ್ದರಿಂದ ಅಧಿಕ ಬಾರವಾಗಿ ತೆಪ್ಪ ಮಗುಚಿ ಬಿದ್ದಿದೆ. ಇದರಲ್ಲಿ ಇಬ್ಬರು ಈಜಾಡಿ ದಡ ಸೇರಿದ್ದು, ಮೂವರು ಮುಳುಗಿ ಸಾವನ್ನಪ್ಪಿದ್ದಾರೆ.
ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ, ದಶರಥ ಗೌಡರ ಅವರ ಶವ ಪತ್ತೆಯಾಗಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೂ ಪೊಲೀಸರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಮೃತರ ಕುಟುಂಬದವರು ಆಕ್ರೋಶ ಹೊರಹಾಕುತ್ತಿದ್ದಾರೆ.
ನಿನ್ನೆಯಿಂದಲೇ ನಾಪತ್ತೆಯಾದವರಿಗಾಗಿ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ನೆರವಿನೊಂದಿಗೆ ಪತ್ತೆ ಕಾರ್ಯಾಚರಣೆ ನಡೆಸಿದರು. ರಾತ್ರಿಯಾದ ಕಾರಣ ಸ್ಥಗಿತವಾಗಿದ್ದ ಕಾರ್ಯಾಚರಣೆ ಬುಧವಾರ ಬೆಳಿಗ್ಗೆಯಿಂದ ಮತ್ತೆ ಆರಂಭವಾಗಿದೆ.