Daily Horoscope

Select Your Language

Notifications

webdunia
webdunia
webdunia
webdunia

ಕರಾವಳಿಗೆ ಘೋಷಣೆ ಮಾಡಿದ ಹಣ ಎಲ್ಲಿಂದ ತರುತ್ತೀರಿ: ಎನ್.ರವಿಕುಮಾರ್ ಪ್ರಶ್ನೆ

N Ravikumar
Photo Credit X
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರಾವಳಿಯ ಅಭಿವೃದ್ಧಿಗೆ ₹32,611 ಕೋಟಿ ಘೋಷಣೆ ಮಾಡಿದ್ದಾರೆ. ಬಜೆಟ್‍ನಲ್ಲಿ ಹಂಚಿಕೆ ಇಲ್ಲದೆ ಆ ಹಣವನ್ನು ಎಲ್ಲಿಂದ ತರುತ್ತಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ. 

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿಗಳು, ಕರಾವಳಿ ಜಿಲ್ಲೆಗಳಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಹಣ ಘೋಷಣೆ ಮಾಡಿದ್ದಾರೆ. ಇದನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ ಆ ಕಾಮಗಾರಿಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರು. 
32,611 ಕೋಟಿಯಲ್ಲಿ 15 ಸಾವಿರ ಕೋಟಿ ರಸ್ತೆಗಳ ಅಭಿವೃದ್ಧಿಗೆ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಕಾರವಾರದಲ್ಲಿ ಬಂದರು ಅಭಿವೃದ್ಧಿ,  ಮೀನುಗಾರಿಕೆ ವಿಶ್ವವಿದ್ಯಾಲಯ ಘೋಷಣೆ ಮಾಡಿದ್ದಾರೆ. ಕರಾವಳಿ ಕರ್ನಾಟಕವನ್ನು ಪ್ರವಾಸೋದ್ಯಮದ ದೊಡ್ಡ ಕೇಂದ್ರ ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ಇದಕ್ಕೆಲ್ಲ ಹಣ ಬೇಕಲ್ಲವೇ ಎಂದು ಪ್ರಶ್ನಿಸಿದರು. 

ಅನ್ನದಾತರಿಗೆ ನಯಾಪೈಸೆ ನೀಡಿಲ್ಲ...

ಈಗಾಗಲೇ ರಾಜ್ಯದ ರೈತರಿಗೆ ಬರ ಪರಿಹಾರವಾಗಿ ನಯಾಪೃಸೆ ನೀಡಿಲ್ಲ. ಮೂರು ಬಾರಿ ಬಿತ್ತನೆ ಮಾಡಿದ್ದರೂ ಬೆಳೆ ಕೈಗೆ ಬಂದಿಲ್ಲ. ಮಳೆ ಕೊರತೆಯಾಗಿದೆ, ಬೋರ್‍ವೆಲ್‍ಗಳಲ್ಲಿ ನೀರು ಇಲ್ಲ. ದನಕರುಗಳಿಗೆ ನೀರು ಇಲ್ಲ. ಬರದಿಂದಾಗಿ ಸಂಪೂರ್ಣವಾಗಿ ಬೆಳೆ ನಾಶವಾಗಿದೆ. ಇದರ ಬಗ್ಗೆ ಗಮನ ಕೊಡದ ಸರ್ಕಾರ ಕರಾವಳಿಗೆ ಮಾತ್ರ ಭರಪೂರ ಘೋಷಣೆ ಮಾಡಿದೆ ಎಂದು ಆಕ್ಷೇಪಿಸಿದರು. 
ಕಸ್ತೂರಿರಂಗನ್ ವರದಿ ಹಾಗೂ ಬರಗಾಲದ ಕುರಿತು ಚರ್ಚಿಸಲು ಸರ್ಕಾರ ಮೂರು ದಿನ ವಿಶೇಷ ಅಧಿವೇಶನ ಕರೆದಿದೆ. ಇದು ಒಳ್ಳೆಯದೇ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರನ್ನು ಸಂಪೂರ್ಣವಾಗಿ ಮರೆತಿರುವ ಸರ್ಕಾರ ಕರಾವಳಿ ಬಗ್ಗೆ ಮಾತ್ರ ವಿಶೇಷ ಕಾಳಜಿ ತೋರುತ್ತಿದೆ ಎಂದು ಹೇಳಿದರು. ರೈತರಿಗೆ ಯಾವಾಗ ಹಣ ಬಿಡುಗಡೆ ಮಾಡುತ್ತೀರಿ? ಬರಪರಿಹಾರ ಯಾವಾಗ ಕೋಡ್ತೀರಿ ಎಂದು ಮುಖ್ಯಮಂತ್ರಿಗಳು ಹೇಳಲಿ. ವಿಶೇಷ ಅಧಿವೇಶನದಲ್ಲಾದರೂ ಪ್ರಕಟ ಮಾಡಲಿ ಎಂದು ಆಗ್ರಹಿಸಿದರು. 

ಮಾಸಾಶನಗಳು ಐದು ತಿಂಗಳಿಂದ ಬಂದಿಲ್ಲ...

ವಿಧವೆಯರು, ಅಂಗವಿಕಲರು, ವೃದ್ಧರ ಮಾಸಾಶನವನ್ನು ಸರಿಯಾಗಿ ನೀಡುತ್ತಿಲ್ಲ. ಒಟ್ಟು 23 ಲಕ್ಷ ವೃದ್ಧರು, ವಿಧವೆಯರು ಮತ್ತು ವಿಶೇಷಚೇತನರಿಗೆ ಮಾಸಾಶನ ಕಳೆದ ಐದು ತಿಂಗಳಿಂದ ಬಂದಿಲ್ಲ. ಈ ಸರ್ಕಾರ ಗ್ಯಾರಂಟಿಯನ್ನು ಬಡವರಿಗೆ ಕೊಡುತ್ತಿದೆ ಎಂದು ಹೇಳಿಕೊಳ್ಳುತ್ತದೆ. ಆದರೆ ವೃದ್ಧರು, ಅಂಗವಿಕಲರು ಅಸಹಾಯಕರು. ಅವರಿಗೆ ಒಂದು ತಿಂಗಳ ಹಣ ಸಿಗದಿದ್ದರೆ ಸಾಕಷ್ಟು ತೊಂದರೆಯಾಗುತ್ತದೆ. ಸರ್ಕಾರದ ಇಂತಹ ಧೋರಣೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು. 
ಗುತ್ತಿಗೆದಾರರಿಗೆ 30 ಸಾವಿರ ಕೋಟಿ ನೀಡದ್ದರಿಂದ ಅವರು ಕಂಗಾಲಾಗಿ ಆತ್ಮಹತ್ಯೆ ದಾರಿ ಹಿಡಿದಿದ್ಧಾರೆ. ಬೆಂಗಳೂರಿನ ರಸ್ತೆಗಳು ಒಂದೇ ದಿನದ ಮಳೆಗೆ ಕೊಚ್ಚಿ ಹೋಗಿವೆ. ಇಡೀ ರಾಜ್ಯ ಗುಂಡಿ ರಾಜ್ಯವಾಗಿದೆ. ಈ ಎಲ್ಲದರ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯಪ್ರದೇಶದ ನದಿ ಅಪಘಾತದಲ್ಲಿ ಮೃತಪಟ್ಟ ಎಂಟು ಭಕ್ತರ ಕುಟುಂಬಗಳಿಗೆ ತಲಾ 2 ಲಕ್ಷ ಮೋದಿ ಘೋಷಣೆ