Publish Date: Thu, 03 Oct 2019 (16:38 IST)
Updated Date: Thu, 03 Oct 2019 (16:40 IST)
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ವಿಭಿನ್ನ ಸಮಾರಂಭ ಆಯೋಜನೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೆ.5 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿರುವ ಹತ್ತಿಮತ್ತೂರ ಸಭಾಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ವಿಭಿನ್ನವಾಗಿ ಆಯೋಜಿಸಲಾಗಿದೆ.
ಸಂಘದ 12 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಮಹತ್ಮಾ ಗಾಂಧೀಜಿಯವರ 150 ನೇ ಜನ್ಮ ಜಯಂತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
ಹೀಗಂತ ಸಂಘದ ರಾಜ್ಯಾಧ್ಯಕ್ಷ ಬಿ.ಎ.ಪಾಟೀಲ ಹೇಳಿದ್ದು, ಜೆಡಿಎಸ್ ಮುಖಂಡ, ಎಂಎಲ್ಸಿ ಬಸವರಾಜ ಹೊರಟ್ಟಿ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಪಿ.ಎಸ್.ಧರಣೆಪನವರ ವಹಿಸಲಿದ್ದಾರೆ ಎಂದಿದ್ದಾರೆ.
ಹಿರಿಯ ನಾಗರಿಕರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಹಾಗೂ ಗಾಂಧಿ ಸ್ಮೃತಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ನೇರವೇರಿಸುವರು. ಶಾಸಕ ಅರವಿಂದ ಬೆಲ್ಲದ, 80 ವರ್ಷ ದಾಟಿದ ಸಂಘದ 30 ಸದಸ್ಯರಿಗೆ ಸನ್ಮಾನಿಸಲಿದ್ದಾರೆ ಎಂದಿದ್ದಾರೆ.