Publish Date: Tue, 18 Jun 2019 (15:44 IST)
Updated Date: Tue, 18 Jun 2019 (15:46 IST)
ವಿಧಾನಸಭೆ ಉಪ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಗೆಲುವು ಸಾಧಿಸುವಲ್ಲಿ ಚಾಣಕ್ಯ ನಡೆ ಅನುಸರಿಸಿದ ಸಚಿವ ಡಿ.ಕೆ.ಶಿವಕುಮಾರ್ ಕುಂದಗೋಳ ಭೇಟಿ ನೀಡುತ್ತಿದ್ದಾರೆ.
ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಜೂನ್ 21 ರಂದು ಕುಂದಗೋಳದಲ್ಲಿ ತಾಲೂಕಿನ ವಿವಿಧ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಅಂದು ಬೆಳಗ್ಗೆ ನಡೆಯಲಿರುವ ಈ ಸಭೆಯಲ್ಲಿ ನಾನಾ ಇಲಾಖೆಗಳ ಸಚಿವರೂ ಭಾಗವಹಿಸಲಿದ್ದಾರೆ.
ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ ಹೊತ್ತಿದ್ದ ಸಚಿವ ಡಿ.ಕೆ. ಶಿವಕುಮಾರ್ ಅವರು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಿದರೆ ಅವರ ಬೆನ್ನಿಗೆ ನಿಂತು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಾಗಿ ಆಶ್ವಾಸನೆ ನೀಡಿದ್ದರು. ಅದರ ಮೊದಲ ಹಂತವಾಗಿ ಈ ಸಭೆ ನಡೆಸುತ್ತಿದ್ದಾರೆ. ಕೊಟ್ಟ ಮಾತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆ.
ಈ ಸಭೆಯ ನಂತರ ಸಂಜೆ 5 ಗಂಟೆಗೆ ನೂತನ ಶಾಸಕಿ ಕುಸುಮಾವತಿ ಅವರಿಗೆ ಏರ್ಪಡಿಸಿರುವ ಅಭಿನಂದನಾ ಸಮಾರಂಭದಲ್ಲಿ ಸಚಿವ ಶಿವಕುಮಾರ್ ಭಾಗವಹಿಸುವರು.