Select Your Language

Notifications

webdunia
webdunia
webdunia
webdunia

ಹೈಕಮಾಂಡ್ ಅರ್ಧಚಂದ್ರ ಲೆಕ್ಕಾಚಾರವೇನು?

ಹೈಕಮಾಂಡ್ ಅರ್ಧಚಂದ್ರ ಲೆಕ್ಕಾಚಾರವೇನು?
ಬೆಂಗಳೂರು , ಬುಧವಾರ, 4 ಆಗಸ್ಟ್ 2021 (16:21 IST)
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ರಚನೆಯಾಗಿದ್ದು 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕ್ಯಾಬಿನೆಟ್ ಆಯ್ಕೆ ಲೆಕ್ಕಾಚಾರವನ್ನು ಗಮನಿಸಿದರೆ ಬಿಜೆಪಿ ಹೈಕಮಾಂಡ್ ಜಾಣ ನಡೆಯನ್ನು ಆಯ್ದುಕೊಂಡಿರುವುದು ಸ್ಪಷ್ಟವಾಗಿದೆ.

ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಬಂಡಾಯವೆದಿದ್ದ ಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ಗೆ ಮಂತ್ರಿಗಿರಿ ಸಿಕ್ಕಿಲ್ಲ. ಇನ್ನು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ದೆಹಲಿಗೆ ಓಡಾಡಿದ್ದ ಅರವಿಂದ್ ಬೆಲ್ಲದ್ ಅವರಿಗೂ ಸಚಿವ ಸ್ಥಾನ ಧಕ್ಕಿಲ್ಲ. ಇವರುಗಳಿಗೆ ಸಚಿವ ಸ್ಥಾನ ಸಿಗದಂತೆ ನೋಡಿಕೊಳ್ಳುವಲ್ಲಿ ಆ ಮಟ್ಟಿಗೆ ಬಿಎಸ್ವೈ ಯಶಸ್ವಿಯಾಗಿದ್ದಾರೆ ಅಂತಲೇ ಹೇಳಬಹುದು. ಆದರೆ ಯಡಿಯೂರಪ್ಪ ಪೂರ್ಣವಾಗಿ ಗೆದ್ದಿಲ್ಲ.
ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಹೈಕಮಾಂಡ್ ಬಿಎಸ್ವೈ ಅವರನ್ನು ಸರ್ಕಾರದ ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ, ಹಾಗಂತ ದೂರನೂ ಇಟ್ಟಿಲ್ಲ. ತುಂಬಾನೇ ಚಾಣಾಕ್ಷ ನಡೆಯನ್ನು ಆಯ್ದುಕೊಂಡಿದ್ದಾರೆ. ಬಿಎಸ್ವೈ ಅವರ ಕೆಲ ವಿರೋಧಿಗಳಿಗೆ ಸಚಿವ ಸ್ಥಾನ ಕೊಡದ ಮೂಲಕ ಅವರನ್ನು ಸಮಾಧಾನ ಮಾಡುವ ಕೆಲಸ ಆಗಿದೆ. ಆದರೆ ಅವರ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಆಪ್ತ ಶಾಸಕ ಎಂ.ಪಿ.ರೇಣುಕಾಚಾರ್ಯಗೂ ಹೈಕಮಾಂಡ್ ಸಚಿವ ಸ್ಥಾನ ನೀಡಿಲ್ಲ. ಆ ಮೂಲಕ ಬಿಎಸ್ವೈಗೆ ಹೈಕಮಾಂಡ್ ಅರ್ಧಚಂದ್ರವನ್ನು ನೀಡಿದೆ ಎನ್ನಬಹುದು.
ಸಿಎಂ ಸ್ಥಾನದಿಂದ ಕೆಳಗಿಳಿದ ಯಡಿಯೂರಪ್ಪ ಸೂಚನೆಯಂತೆ ಬೊಮ್ಮಾಯಿಗೆ ಸಿಎಂ ಪಟ್ಟ ಕಟ್ಟಲಾಗಿದೆ. ಬಿಎಸ್ವೈ ಕೃಪೆಯಿಂದ ಸಿಎಂ ಆಗಿರುವ ಬೊಮ್ಮಾಯಿ ಅವರಿಗೆ ಯಡಿಯೂರಪ್ಪರ ನೆರಳಾಗದಂತೆ ದೆಹಲಿ ನಾಯಕರು ಮೊದಲೇ ಎಚ್ಚರಿಸಿದ್ದಾರೆ. ಅದೇ ರೀತಿ ವಿಜಯೇಂದ್ರ, ರೇಣುಕಾಚಾರ್ಯ ಅವರನ್ನು ಸರ್ಕಾರ ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಯಡಿಯೂರಪ್ಪ ನೆರಳಿನಿಂದ ಕೊಂಚ ಸರಿದು ಸ್ವಂತಿಕೆ ಕಾಪಾಡುಕೊಳ್ಳಲು ಬೊಮ್ಮಾಯಿ ಕೂಡ ಮುಂದಾಗಿದ್ದಾರೆ ಎಂದೇ ವಿಶ್ಲೇಷಿಸಬಹುದಾಗಿದೆ.
ಇನ್ನು ಮೂಲಗಳ ಪ್ರಕಾರ ಕ್ಯಾಬಿನೆಟ್ ಆಯ್ಕೆಗೆ ಯಡಿಯೂರಪ್ಪ ಸೂಚಿಸಿದ್ದ ಶಾಸಕರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ಕೊಟ್ಟಿಲ್ಲ.
ಬಿಎಸ್ವೈ ನೀಡಿದ್ದ ಪಟ್ಟಿ
•ಎಂಪಿ ರೇಣುಕಾಚಾರ್ಯ
•ಮಾಡಾಳು ವೀರೂಪಾಕ್ಷಪ್ಪ
•ಹರತಾಳು ಹಾಲಪ್ಪ
•ರಾಜೂಗೌಡ ನಾಯಕ್
•ಎಂಪಿ ಕುಮಾರಸ್ವಾಮಿ
•ಪ್ರೀತಂಗೌಡ
•ಶಿವನಗೌಡ ನಾಯಕ್
•ಬಾಲಚಂದ್ರ ಜಾರಕಿಹೊಳಿ
•ತಿಪ್ಪಾರೆಡ್ಡಿ
ಮೇಲಿನ ಪಟ್ಟಿಯಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಬಿಎಸ್ವೈ ಬೇಡ ಎಂದವರಿಗೆ ಬಿಜೆಪಿ ಸಚಿವ ಸ್ಥಾನ ಕೊಟ್ಟಿಲ್ಲವಾದರೂ, ಬೇಕು ಎಂದವರಿಗೂ ಸಚಿವ ಸ್ಥಾನ ನೀಡದೆ ರಾಜಕೀಯ ದಾಳ ಉರುಳಿಸಲಾಗಿದೆ.
ಇನ್ನು ಈ ಬಾರಿಯೂ ಮಂತ್ರಿಗಿರಿಯಿಂದ ವಂಚಿತರಾದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಯಡಿಯೂರಪ್ಪ ಬಳಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ. ಒಳ್ಳೆಯ ಕೆಲಸ ಮಾಡಿದರು ಹೈಕಮಾಂಡ್ ಕ್ಯಾಬಿನೆಟ್ಗೆ ಸೇರಿಸಿಕೊಂಡಿಲ್ಲ ಎಂದು ಭಾವುಕರಾಗಿ ಬಿಎಸ್ವೈ ಎದುರು ಕಣ್ಣೀರಿಟ್ಟಿದ್ದಾರೆ ಎನ್ನಲಾಗುತ್ತಿದೆ. ಕೋವಿಡ್ ಸಮಯದಲ್ಲಿ ತಮ್ಮ ಕೆಲಸದ ಮೂಲಕವೇ ರೇಣುಕಾಚಾರ್ಯ ಹೆಸರಾಗಿದ್ದರು. ದೆಹಲಿ ನಾಯಕರು ಕರೆ ಮಾಡಿ ಒಳ್ಳೆಯ ಕೆಲಸ ಮಾಡುತ್ತಿದ್ದೀರ ಎಂದು ಶಹಬ್ಬಾಶ್ ಗಿರಿ ಕೊಟ್ಟಿದ್ದರು. ಇದರಾಚೆಗೂ ಹೊನ್ನಾಳಿ ಶಾಸಕರಿಗೆ ಮಂತ್ರಿ ಆಗುವ ಭಾಗ್ಯ ಇನ್ನೂ ಬಂದಿಲ್ಲ.
ಮಂತ್ರಿ ಸ್ಥಾನ ದೊರೆಯದ ಹಿನ್ನೆಲೆ ಯಡಿಯೂರಪ್ಪರನ್ನು ಭೇಟಿ ಮಾಡಿದ ರೇಣುಕಾಚಾರ್ಯ ಅವರು ನಾನು ಪಕ್ಷದ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ನಾನು ಮಾಡಿದ ತಪ್ಪಾದರೂ ಏನು? ಪಕ್ಷ ವಿರೋಧಿಗಳ ವಿರುದ್ಧ ಹೋರಾಟ ಮಾಡಿದ್ದೇ ತಪ್ಪಾ ಎಂದು ಪ್ರಶ್ನಿಸುವ ಮೂಲಕ ಗದ್ಗದಿತರಾದರು ಎನ್ನಲಾಗುತ್ತಿದೆ. ಮುಂದೆ ಪಕ್ಷದಲ್ಲಿ ಒಳ್ಳೆಯ ಭವಿಷ್ಯ ಇದೆ ಎಂದು ಯಡಿಯೂರಪ್ಪ ಸಮಾಧಾನ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಪಿಯು ಫಲಿತಾಂಶದ ಎಫೆಕ್ಟ್!