ಬೆಂಗಳೂರು: ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಎಷ್ಟು ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ನಾವು ನಮ್ಮ ಅಧಿಕಾರದಲ್ಲಿ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಕಾಂಗ್ರೆಸ್ ನಾಯಕರ ಬಗ್ಗೆ ಶ್ರೀರಾಮುಲು, ಜನಾರ್ಧನ ರೆಡ್ಡಿಯವರು ತುಚ್ಛವಾಗಿ ಮಾತನಾಡುತ್ತಾರೆ. ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಇನ್ನೂ ಜನಾರ್ಧನ ರೆಡ್ಡಿ ಅವರನ್ನು ಬಳ್ಳಾರಿಗೆ ಬರಬಾರದಂತೆ ಯಾಕೆ ಹೇಳಲಾಗಿತ್ತು, ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರ್ತಿಸಿದವರು ಯಾರು? ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಈ ಬಗ್ಗೆ ವರದಿ ಕೊಟ್ಟಿದ್ದರು.
ಇನ್ನೂ ನಾನು ಲೋಕಸಭಾ ಚುನಾವಣೆಗೆಂದು ಬಳ್ಳಾರಿಗೆ ಹೋಗಿದ್ದ ವೇಳೆ ನನಗೆ ಸಾರ್ವಜನಿಕ ಸಭೆ ನಡೆಸಲು ಎಲ್ಲೂ ಸ್ಥಳವನ್ನು ನೀಡಲಿಲ್ಲ. ಕೊನೆಗೆ ಕುರುಬರ ದೇವಸ್ಥಾನದ ಬಳಿ ಸಭೆ ನಡೆಸಿದೆವು. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಸರ್ವಾಧಿಕಾರದಲ್ಲಿ ನಂಬಿಕೆ ಇದೆ ಎನ್ನಲು ಇದೊಂದು ಉದಾಹರಣೆ ಸಾಕು.
ಗೂಂಡಾಗಿರಿ ಮಾಡುತ್ತಿರುವವರಿಂದ ನಾವೇನು ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಅದರ ಆಶಯಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಬಿಜೆಪಿಯ ಜನಾಂದೋಲನದ ಹಿಂದೆ ರಾಜಕೀಯ ಉದ್ದೇಶ ಬಿಟ್ಟರೆ ಬೇರೇನಿದೆ ಎಂದರು.