ಸುಮ್ಮನೇ ಹಾಗೇ! ವಾಟ್ಸ್ ಆಪ್ ಬಂದಿದ್ದೇ ಬಂದಿದ್ದು ಜನ ತಮ್ಮ ಜ್ಞಾನ, ತಿಳಿವಳಿಕೆಗಳನ್ನು ನೂರೆಂಟು ಜನಕ್ಕೆ ತಿಳಿಸುತ್ತಿರುತ್ತಾರೆ, ಹರಡುತ್ತಿರುತ್ತಾರೆ. ಎಲ್ಲರೂ ತಮ್ಮದೇ ಮಾರ್ಗದಲ್ಲಿ, ಸಾಮರ್ಥ್ಯದಲ್ಲಿ ತತ್ತ್ವಜ್ಞಾನಿಗಳು, ವಿಚಾರವಂತರೂ ಆಗಿದ್ದಾರೆ. ಮತ್ತು ತಮ್ಮ ಜ್ಞಾನ ಸಂಪತ್ತನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನಿತ್ಯ ಜೀವನದಲ್ಲಿ ತತ್ತ್ವಜ್ಞಾನಗಳ ಹರಿವು ವಿಶಾಲವಾಗುತ್ತಿದೆ. ವಿಭಿನ್ನವಾಗುತ್ತಿದೆ! ಆದರೆ ಇದಕ್ಕೆ ಯಾವುದೇ ಆಧಾರ, ತರ್ಕಗಳ ಗೊಡವೆ ಇಲ್ಲ. ಸಿದ್ಧಸೂತ್ರಗಳು ಇಲ್ಲ. ಟೈಂಪಾಸ್ಗೇ ಅಂದರೂನೂ ಜ್ಞಾನ ಎಲ್ಲಿದ್ದರೂ ಜ್ಞಾನವೆ ಅಲ್ಲವಾ!? ಅರಿತರೆ ಜೀವನ ಸುಖ ಸಮೃದ್ಧಿಯಾದೀತು. ಕುಲ್ಫಿ ತಿ೦ದಾದ ಮೇಲೆ ಕಡ್ಡಿಯನ್ನು ನೆಕ್ಕುವುದು… ಇದನ್ನೇ ಲೋಭ ಎನ್ನಬಹುದು!
ಕಡ್ಡಿ ಬಿಸಾಡಿದ ಮೇಲೆ ಇನ್ನೊಬ್ಬರದ್ದು ಖಾಲಿಯಾಗದೇ ಅವರು ನೆಕ್ಕುವುದನ್ನು ನೋಡಿ ಇವರದ್ದು ಇನ್ನೂ ಖಾಲಿಯಾಗಿಲ್ಲವೆ ಅ೦ದುಕೊಳ್ಳುವುದುದು… ಅಸೂಯೆ ಎನ್ನಬಹುದು!
ಕುಲ್ಫಿ ತಿನ್ನುವಾಗ ಪೂರಾ ಕೆಳಗೆ ಬಿದ್ದು ಕಡ್ಡಿ ಮಾತ್ರ ಉಳಿದಾಗ ಮನಸ್ಸಲ್ಲಿ ಮೂಡುವ ಭಾವನೆಯನ್ನೇ… ಕ್ರೋಧ ಎನ್ನಬಹುದು!
ನಿದ್ದೆಯಿ೦ದ ಎಚ್ಚೆತ್ತ ಮೇಲೂ ಒಂದೆರಡು ಗಂಟೆ ಕಾಲ ಹಾಗೆಯೇ ಮೊಸಳೆಯ೦ತೆ ಬಿದ್ದು ಕೊ೦ಡಿರುವುದನ್ನು… ಆಲಸ್ಯ ಎನ್ನಬಹುದು!
ಹೋಟೆಲಿನಲ್ಲಿ ಚೆನ್ನಾಗಿ ತಿ೦ದಾದ ಮೇಲೆ ಬಾಯಿ ತು೦ಬಾ ಸೋಂಪ್ ಕಾಳು ಮತ್ತು ಸಕ್ಕರೆ ಮಿಶ್ರಣವನ್ನು ಹಾಕಿಕೊಂಡಾದ ಮೇಲೂ ಅಲ್ಲೇ ಇರುವ ಪೇಪರ್ ನಲ್ಲಿ ತು೦ಬಿಕೊಳ್ಳುವುದನ್ನು… ದುರಾಸೆ ಎನ್ನದೆ ವಿಧಿಯಿಲ್ಲ!
ಮನೆಗೆ ಬೀಗ ಜಡಿದು ಎರಡು ಮೂರು ಬಾರಿ ಎಳೆದು ನೋಡುವುದನ್ನೇ… ಭಯ ಎನ್ನಲಾಗುತ್ತದೆ!
ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ ಮೇಲೆ ಪದೆ ಪದೆ ನೀಲಿ ಗೆರೆ (ಅಂದರೆ ನೋಡಿದ್ದಾರಾ ಅಂತಾ ಚೆಕ್ ಮಾಡುವುದು) ನೋಡುವುದನ್ನೇ.. ಕೆಟ್ಟ ಕುತೂಹಲ ಅಥವಾ ಕೆಟ್ಟ ಉತ್ಸುಕತೆ ಎನ್ನಬಹುದಲ್ಲವಾ!
ಪಾನಿಪುರಿ ತಿನ್ನುವಾಗ, ಪಾನಿಗಾಗಿ ಪಾನಿಪುರಿ ಅ೦ಗಡಿಯವನನ್ನು ಅಣ್ಣಾ ಎ೦ದು ಗೋಗರೆಯುವುದನ್ನೇ… ಶೋಷಣೆ ಅನ್ನಬಹುದಲ್ಲವಾ?
ಕಾಫಿ ಕುಡಿದು ಕೊನೆ ಸಿಪ್ ವರೆಗೂ ಸುರ್ ಸುರ್ ಅ೦ತ ಹೀರುವುದನ್ನೇ… ಮೃಗತೃಷ್ಣಾ ಎನ್ನಲು ಅಡ್ಡಿಯಿಲ್ಲ.
ಮಾರ್ಕೆಟ್ ನಲ್ಲಿ ಬಾಳೆಹಣ್ಣು ಕೊಳ್ಳುತ್ತಿರುವಾಗ ಅಲ್ಲೇ ಎಳೆ೦ಟು ದ್ರಾಕ್ಷಿಯನ್ನು ಬಾಯಿಗೆ ತುರುಕಿಕೊಂಡು ಸುಮ್ಮ ಸುಮ್ಮನೆ ರೇಟು ಎಷ್ಟು ಎ೦ದು ಕೇಳುವುದನ್ನು… ಅಕ್ಷಮ್ಯ ಅಪರಾಧ ಎನ್ನಬಹುದು!