ಬೆಂಗಳೂರು: ಇನ್ನೇನು ಒಂದು ತಿಂಗಳು ಕಳೆದ ಹೊಸ ವರ್ಷ ಆರಂಭವಾಗಲಿದ್ದು, ಈ ವೇಳೆ ಬೆಂಗಳೂರಿನ ಜನತೆಗೆ ನೀರಿನ ಬಿಲ್ ಹೆಚ್ಚಳದ ಶಾಕ್ ತಗುಲುವುದು ಗ್ಯಾರಂಟಿ ಎನ್ನಲಾಗಿದೆ.
ಕೆಲವು ಸಮಯದ ಹಿಂದೆ ಜನರು ಎಷ್ಟು ವಿರೋಧ ಮಾಡಿದ್ರೂ ಪರವಾಗಿಲ್ಲ. ನಾವು ನೀರಿನ ಬಿಲ್ ಹೆಚ್ಚಳ ಮಾಡಿಯೇ ತೀರುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ನೀರಿನ ಬಿಲ್ ಪರಿಷ್ಕರಣೆ ಮಾಡದೇ ತುಂಬಾ ಸಮಯವೇ ಆಗಿದೆ. ಹೀಗಾಗಿ ನೀರಿನ ಬಿಲ್ ಹೆಚ್ಚಳ ಮಾಡುವುದು ಅನಿವಾರ್ಯ ಎಂದಿದ್ದರು.
ಇದೀಗ ನೀರಿನ ಬಿಲ್ ಹೆಚ್ಚಳ ಮಾಡಲು ಬೆಂಗಳೂರು ಜಲಮಂಡಳಿ ಚಿಂತನೆ ನಡೆಸಿದ್ದು, ಜನಪ್ರತಿನಿಧಿಗಳ ಸಭೆ ಕರೆದು ದರ ಏರಿಕೆಯ ಬಗ್ಗೆ ನಿರ್ಧಾರಕ್ಕೆ ಬರಲಿದೆ. ಈಗಾಗಲೇ ನೀರಿನ ದರ ಏರಿಕೆ ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಚರ್ಚೆ ಮಾಡಲಾಗಿದೆ. ಸಾರ್ವಜನಿಕರು, ಜನಪ್ರತಿನಿಧಿಗಳ ಸಭೆ ನಡೆಸಿ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಜಲಮಂಡಳಿ ಅಧ್ಯಕ್ಷ ಡಾ ವಿ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಜಲಮಂಡಳಿ ಆರ್ಥಿಕ ಸಂಕಷ್ಟದಲ್ಲಿದ್ದು, ಅದನ್ನು ಸರಿದೂಗಿಸಲು ಜನರಿಗೆ ಬೆಲೆ ಏರಿಕೆಯ ಬರೆ ಎಳೆಯಲಾಗುತ್ತದೆ. ಪ್ರತೀ ತಿಂಗಳು ಜಲಮಂಡಳಿಗೆ 20-30 ಕೋಟಿ ರೂ. ಆದಾಯವಿದೆ. ಆದರೆ ಇದು ಸಿಬ್ಬಂದಿಗಳ ವೇತನ ಪಾವತಿಗೇ ಸರಿ ಹೋಗುತ್ತಿದೆ ಎಂಬುದು ಜಲಮಂಡಳಿಯ ವಾದವಾಗಿದೆ. ಹೀಗಾಗಿ ನೀರಿನ ದರ ಏರಿಕೆ ಮಾಡಿ ಆರ್ಥಿಕ ಹೊರೆ ತಗ್ಗಿಸಲು ಮುಂದಾಗಿದೆ.