ನಗರೋತ್ಥಾನ ಯೋಜನೆಯಡಿ ಮಡಿಕೇರಿ ನಗರಸಭೆಗೆ 40 ಕೋಟಿ ರೂ. ಹಾಗೂ ಮುಖ್ಯಮಂತ್ರಿ ಅವರ ವಿಶೇಷ ಪ್ಯಾಕೇಜ್ನಡಿ 5 ಕೋಟಿ ರೂ. ಬಿಡುಗಡೆಯಾಗಿರುವ ಹಿನ್ನೆಲೆ, ಕ್ರೀಯಾಯೋಜನೆ ಅಂತಿಮ ಗೊಳಿಸುವಲ್ಲಿ ನಗರದ ವಿವಿಧ ವಾರ್ಡ್ಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶನಿವಾರ ಭೇಟಿ ನೀಡಿ ಸಾರ್ವಜನಿಕರು ಹಾಗೂ ನಗರಸಭಾ ಸದಸ್ಯರಿಂದ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ಸ್ಟೋನ್ಹಿಲ್ ಬಳಿ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಸಂಸ್ಕರಣಾ ಘಟಕ ಬಳಿ 25 ಲಕ್ಷ ಲೀ ಸಾಮಥ್ರ್ಯದ ಟ್ಯಾಂಕ್ ನಿರ್ಮಾಣ ಆಗುತ್ತಿದ್ದು, ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೂಚಿಸಿದರು.
ಮಡಿಕೇರಿ ನಗರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದು, ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸಗಳ ಸಂಬಂಧ ಶಾಸಕರು ಮಾಹಿತಿ ಪಡೆದರು.
ನಗರದ ಸ್ಟೋನ್ ಹಿಲ್ ರಸ್ತೆ ಮಾರ್ಗದಲ್ಲಿರುವ ಬಂಟ ಸಮಾಜದ ಸ್ಮಶಾನ ಭೂಮಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿಸಿಕೊಡುವಂತೆ ನಗರಸಭಾ ಸದಸ್ಯರಾದ ಅರುಣ್ ಶೆಟ್ಟಿ ಅವರು ಶಾಸಕರಲ್ಲಿ ಕೋರಿದರು.
ಕಾವೇರಿ ಬಡಾವಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀರು ನಿಲ್ಲುವ ಸ್ಥಳದಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡುವಂತೆ ಸದಸ್ಯರಾದ ಮಹೇಶ್ ಜೈನಿ ಅವರು ಗಮನ ಸೆಳೆದರು.
2018 ರಲ್ಲಿ ಸುರಿದ ಭಾರಿ ಮಳೆಯಿಂದ ಮುತ್ತಪ್ಪ ದೇವಸ್ಥಾನದ ಬಳಿ ಮನೆ ಜಾರಿ ಹೋಗಿದ್ದು, ಆ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು. ಇಲ್ಲದಿದ್ದಲ್ಲಿ ರಸ್ತೆ ಕುಸಿಯುವ ಸಾಧ್ಯತೆ ಇದೆ ಎಂದು ಮಹೇಶ್ ಜೈನಿ ಅವರು ಶಾಸಕರ ಗಮನಕ್ಕೆ ತಂದರು.
ಕನ್ನಿಕಾ ಬಡಾವಣೆ ಬಳಿ ತೋಡು/ಚರಂಡಿ ನಿರ್ಮಾಣ ಮಾಡಬೇಕು ಎಂದು ಸದಸ್ಯರಾದ ಅಪ್ಪಣ್ಣ ಅವರು ಶಾಸಕರಲ್ಲಿ ಮನವಿ ಮಾಡಿದರು.
ನಗರಸಭಾ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ ಮತ್ತು ಉಪಾಧ್ಯಕ್ಷರಾದ ಸವಿತಾ ರಾಕೇಶ್ ಅವರು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಆಗಬೇಕಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.
ಮತ್ತಷ್ಟು ಮಾಹಿತಿ: ನಗರೋತ್ಥಾನ ಕಾಮಗಾರಿ ಸಂಬಂಧ ಕ್ರೀಯಾಯೋಜನೆ ಅಂತಿಮಗೊಳಿಸುವ ನಿಟ್ಟಿನಲ್ಲಿ ನಗರದ ಎಲ್ಲಾ ವಾರ್ಡ್ಗಳಿಗೆ ಶಾಸಕರು ಭೇಟಿ ನೀಡಿದರು. ಆಯಾಯ ವಾರ್ಡ್ಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ಕೈಗಾರಿಕಾ ಬಡಾವಣೆಯ ರಸ್ತೆಯಲ್ಲಿ ಹೆಚ್ಚಾಗಿ ನೀರು ತುಂಬುವುದರಿಂದ ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆ ಆಗಲಿದ್ದು, ಈ ಪ್ರದೇಶದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕಾಗಿ ಸದಸ್ಯರು ಶಾಸಕರಲ್ಲಿ ಮನವಿ ಮಾಡಿದರು.
ಕೂಟುಹೊಳೆ ಕುಂಡಾಮೇಸ್ತ್ರಿ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಸಿಸಿಟಿವಿ ಅಳವಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಾಯುಕ್ತರಾದ ಎಸ್.ವಿ.ರಾಮದಾಸ್, ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ಕುಮಾರ್, ಸೌಮ್ಯ, ಒಳಚರಂಡಿ ಮಂಡಳಿಯ ಎಇಇ ವಿನಯ್, ನಗರಸಭಾ ಸದಸ್ಯರು ಇತರರು ಇದ್ದರು.