ಪ್ರಯಾಗ್ ರಾಜ್: ಮಹಾಕುಂಭಮೇಳದಲ್ಲಿ ಭಕ್ತರಿಗಾಗಿ ತಯಾರಿಸಲಾಗುತ್ತಿದ್ದ ಆಹಾರಕ್ಕೆ ಬೂದಿ ಎರಚಿದ ಪೊಲೀಸ್ ಅಧಿಕಾರಿಯೊಬ್ಬರ ದುರ್ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕುಂಭಮೇಳಕ್ಕೆ ಪ್ರತಿನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಇವರೆಲ್ಲರಿಗೂ ಅಲ್ಲಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಊಟಕ್ಕಾಗಿ ಒಲೆಯ ಮೇಲೆ ಸಾಂಬಾರ್ ನಂತಹ ಪದಾರ್ಥವನ್ನು ಇಟ್ಟು ಬೇಯಿಸಲಾಗುತ್ತಿತ್ತು. ಈ ಆಹಾರಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಬೂದಿ ಹಾಕಿದ್ದಾರೆ.
ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಪೊಲೀಸ್ ಅಧಿಕಾರಿಯ ವರ್ತನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಪೊಲೀಸ್ ಅಧಿಕಾರಿಯನ್ನು ಬ್ರಿಜೇಶ್ ತಿವಾರಿ ಎಂದು ಗುರುತಿಸಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಡಿಸಿಪಿ ಕುಲದೀಪ್ ಸಿಂಗ್ ಆರೋಪಿ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ತಕ್ಷಣದಿಂದಲೇ ಅಮಾನತು ಆದೇಶ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. ಇಂತಹ ಅಧಿಕಾರಿಗಳಿಂದ ಪೊಲೀಸ್ ಇಲಾಖೆಗೆ ಮತ್ತು ಕುಂಭಮೇಳ ಆಯೋಜಕರಿಗೂ ಕೆಟ್ಟ ಹೆಸರು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.