ವಿಜಯಪುರ: ಕೆಲಸಕ್ಕೆ ತಡವಾಗಿ ಬಂದ ತಪ್ಪಿಗೆ ಮೂವರು ಕಾರ್ಮಿಕರನ್ನು ಮಾಲಿಕ ತನ್ನ ಚೇಲಾಗಳೊಂದಿಗೆ ಸೇರಿಕೊಂಡು ಹಿಗ್ಗಾ ಮುಗ್ಗಾ ಥಳಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಂಬಂಧ ಆರೋಪಿ ಮಾಲಿಕನನ್ನು ಅರೆಸ್ಟ್ ಮಾಡಲಾಗಿದೆ.
ಇಟ್ಟಿಗೆ ಭಟ್ಟಿಯಲ್ಲಿ ಮೂವರು ಕಾರ್ಮಿಕರನ್ನು ಕೂಡಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ವಿಜಯಪುರದ ಹೊರವಲಯದಲ್ಲಿ ಗಾಂಧಿ ನಗರದ ಸ್ಟಾರ್ ಚೌಕ್ ಬಳಿ ಇಟ್ಟಿಗೆ ಭಟ್ಟಿ ಮಾಲಿಕ ಈ ಕೃತ್ಯವೆಸಗಿದ್ದಾನೆ.
ಕಾರ್ಮಿಕರ ಕೈ ಕಾಲು ಕಟ್ಟಿ ಹಾಕಿ ಕೂಡಿ ಹಾಕಿದ್ದಲ್ಲದೆ, ಮಾಲಿಕ ಮತ್ತು ಮಗ ಸೇರಿಕೊಂಡು ಅಮಾನುಷವಾಗಿ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಎಚ್ಚೆತ್ತುಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಹಲ್ಲೆಗೊಳಗಾದ ಕಾರ್ಮಿಕರಾದ ಬಸಪ್ಪ, ಉಮೇಶ ಮತ್ತು ಸದಾಶಿವ ಎಂಬವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾಲಿಕ ಖೇಮು ರಾಠೋಡರನ್ನು ಅರೆಸ್ಟ್ ಮಾಡಲಾಗಿದೆ. ಸಂಕ್ರಾಂತಿ ಹಬ್ಬದ ನಿಮಿತ್ತ ಕಾರ್ಮಿಕರು ಊರುಗಳಿಗೆ ತೆರಳಿದ್ದರು. ಜನವರಿ 15 ರಂದು ಕೆಲಸಕ್ಕೆ ಬರಲು ಮಾಲಿಕ ಕರೆ ಮಾಡಿದ್ದ. ಆಗ ಕಾರ್ಮಿಕರು ಹಬ್ಬದ ಖರ್ಚಿಗೆ ಹಣ ಕೇಳಿದ್ದರು. ಇದಕ್ಕೆ ಒಪ್ಪುವಂತೆ ನಾಟಕ ಮಾಡಿದ್ದ ಮಾಲಿಕ ಖೇಮು ರಾಠೋಡ ಕಾರ್ಮಿಕರನ್ನು ಇಟ್ಟಿಗೆ ಭಟ್ಟಿಗೆ ಬರಲು ಹೇಳಿದ್ದ.
ಬಂದಾಗ ಮೂವರನ್ನೂ ಕೈ ಕಾಲು ಕಟ್ಟಿ ರೂಂನಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾನೆ. ಅದೂ ಸಾಲದೆಂಬಂತೆ ತಾವು ಹಲ್ಲೆ ನಡೆಸಿದ ದೃಶ್ಯವನ್ನು ಸೆರೆ ಹಿಡಿದು ಆರೋಪಿಗಳೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.