Select Your Language

Notifications

webdunia
webdunia
webdunia
webdunia

ವಿಧಾನಸೌಧದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಸಿಎಂ ಹೊರಟಿರುವುದು ದುರುದ್ದೇಶ

ವಿಧಾನಸೌಧದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಸಿಎಂ ಹೊರಟಿರುವುದು ದುರುದ್ದೇಶ
bangalore , ಬುಧವಾರ, 30 ಜೂನ್ 2021 (15:51 IST)
ವಿಧಾನಸೌಧದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಸಿ. ಎಂ ಹೊರಟಿರುವುದು ದುರುದ್ದೇಶದಿಂದ ಎಂದು  ಕನ್ನಡ ಚಳುವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ದೂರಿದರು. 
ರಾಜಕೀಯಕ್ಕಾಗಿ ಮತ್ತೊಂದು ಬಸವಣ್ಣನ ಪ್ರತಿಮೆ ಬೇಡ, ಈಗಾಗಲೇ ಬಸವಣ್ಣನ ಪ್ರತಿಮೆ ಇದೆ, ಈಗ ಇದ್ದಕಿದ್ದ ಹಾಗೆ ಬಸವಣ್ಣನ ಪ್ರತಿಮೆ ಸ್ಥಾಪಿಸಲು ಹೊರಟಿರುವ ಮುಖ್ಯಮಂತ್ರಿ  ಯಡಿಯೂರಪ್ಪ ಚಿಂತನೆ ಏನು?  ರಾಜಕೀಯ ಉದ್ದೇಶವಾದರೂ ಎಂತಹದು ? ವಿಧಾನಸೌಧ ಈಗ ಭ್ರಷ್ಟರ ಸೌಧವಾಗಿದೆ , ಸರ್ಕಾರದ ಕೆಲಸ ದೇವರ ಕೆಲಸ ಹೋಗಿ ಸರ್ಕಾರದ ಕೆಲಸ ಲಂಚದ ಕೆಲಸ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಈ ನಡುವೆ ಮಹಾಮಹಿಮ ಬಸವಣ್ಣನವರ ಪ್ರತಿಮೆ ವಿಧಾನಸೌಧದಲ್ಲಿ ಮಾಡುವುದರ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿ ವಾಟಾಳ್ ನಾಗರಾಜ್ ಇಂದು ಚಾಲುಕ್ಯ ವೃತ್ತದ ಬಸವಣ್ಣನ  ಕಂಚಿನ ಪ್ರತಿಮೆಯ ಮುಂದೆ ಏಕಾಂಗಿ ಧರಣಿ ನೆಡೆಸಿದರು.  
 
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನಾನು ನಿಂತಿರುವಂತಹ ಸ್ಥಳ ಬಹಳ ಪವಿತ್ರವಾಗಿದ್ದು, ವಿಧಾನಸೌಧದ ಪಕ್ಕದಲ್ಲೇ ತುಂಬಾ ಹತ್ತಿರದಲ್ಲೇ ವಿಶ್ವ ಮಾನವರಾದ ಬಸವಣ್ಣನವರ ಪ್ರತಿಮೆಯ ಮುಂದೆ  ನಿಂತಿದ್ದೇನೆ, ಈ ಪ್ರತಿಮೆ 40 ವರ್ಷದ ಹಿಂದೆ ಉದ್ಘಾಟನೆಯಾಗಿದೆ. ಅಂದಿನ ರಾಷ್ಟ್ರಪತಿಯಾಗಿದ್ದಂತಹ ಕೆ.ಆರ್.ನಾರಾಯಣ್. ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದಾರೆ ಎಂದು ತಿಳಿಸಿದರು.
 
ಅದ್ಭುತವಾದ ಕಂಚಿನ ಪ್ರತಿಮೆ ಇದ್ದರೂ ಯಡಿಯೂರಪ್ಪ ವಿಧಾನಸೌಧದಲ್ಲಿ ಬಸವಣ್ಣನ ಪ್ರತಿಮೆ ಮಾಡಲು ಹೊರಟಿದ್ದಾರೆ.  ಇದುವರೆಗೆ ಯಾಕೆ ಮಾಡಲಿಲ್ಲ, ಈಗ ಮಾಡಲು ಹೊರಟಿರುವ  ಉದ್ದೇಶ ರಾಜಕೀಯ, ಅಧಿಕಾರ ಉಳಿಸಿಕೊಳ್ಳಲು , ಸ್ವಾರ್ಥಕ್ಕಾಗಿ ಮಾತ್ರ ಎಂದು ಕಿಡಿಕಾರಿದರು.
 
ಈಗ ಮತ್ತೊಂದು ಬಸವಣ್ಣನ ಪ್ರತಿಮೆ ಮಾಡುವುದಕ್ಕೆ ಹೊರಟಿದ್ದೀರಾ, ವಿಧಾನಸೌಧ ಈಗ ಭ್ರಷ್ಟರ ಸೌಧ, ನೀವು ಭ್ರಷ್ಟ ಮುಖ್ಯಮಂತ್ರಿ,, ನಿಮ್ಮ ಮಂತ್ರಿಮಂಡಲ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ, ನಿಮ್ಮ ಕೈಯಲ್ಲಿ ಬಸವಣ್ಣನ  ಪ್ರತಿಮೆ ಅದೂ ವಿಧಾನಸೌಧದಲ್ಲಿ ಆಗಬಾರದು. ನೀವು ಅಧಿಕಾರ ಉಳಿಸಿಕೊಳ್ಳಲು, ಸಿ.ಎಂ ಆಗಿ ಮುಂದುವರೆಯಲು ಬಸವಣ್ಣನ ಪ್ರತಿಮೆ ಮಾಡಲು ಹೊರಟಿದ್ದೀರಿ ಇದನ್ನು ನೇರವಾಗಿ ವಿರೋಧ ಮಾಡುತ್ತೇನೆ, ಇಡೀ ಕರ್ನಾಟಕ ಇತಿಹಾಸದಲ್ಲಿ ಭ್ರಷ್ಟ ಮುಖ್ಯಮಂತ್ರಿ ಇದ್ದಾರೆ ಅದೂ ಯಡಿಯೂರಪ್ಪ ಮಾತ್ರ ಎಂದು ಮಾತಿನ ಚಾಟಿ ಬೀಸಿದರು.
 
ಜೈಲಿಗೆ ಹೋಗಿ ಬಂದಂಥ ಭ್ರಷ್ಟ ಸಿ.ಎಂ ಬಿ .ಎಸ್.ವೈ , ನಿಮಗೆ  ಬಸವಣ್ಣನ ಪ್ರತಿಮೆ ಮಾಡಲು ಯಾವ ಯೋಗ್ಯತೆ ಇಲ್ಲ, ಇಲ್ಲೇ ಇರುವ ಕಂಚಿನ ಪ್ರತಿಮೆ ಅದ್ಭುತವಾಗಿದೆ, ಎಷ್ಟು ಪ್ರತಿಮೆ ಮಾಡುತ್ತೀರಿ ಎನ್ನುವುದು ಮುಖ್ಯವಲ್ಲ , ನೀವು ಈಗ ಪ್ರತಿಮೆ ಮಾಡೋದಕ್ಕೆ ಹೊರಟಿರುವುದು  ನಿಮ್ಮ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದು, ಕೇವಲ ನಿಮ್ಮ ಅಧಿಕಾರ ಉಳಿಸಿಕೊಳ್ಳಲು ಬಸವಣ್ಣನವರ ಪ್ರತಿಮೆ ಮಾಡಲು ಹೊರಟಿದ್ದೀರಿ, ಕೇವಲ ನಿಮ್ಮ ಸ್ವಾರ್ಥ.  ಕಳಬೇಡ , ಕೊಲಬೇಡ, ಹುಸಿಯನುಡಿಯಲು ಬೇಡ ಎಂದು ಮಹಾಪುರುಷರಾದ  ಹೇಳಿರುವುದು ಒಂದನ್ನು ಪಾಲಿಸದ ನಿಮಗೆ ಸರ್ಕಾರಕ್ಕೆ ಬಸವಣ್ಣನ ಪ್ರತಿಮೆ ಸ್ಥಾಪಿಸುವ ನೈತಿಕತೆ ಎಳ್ಳಷ್ಟೂ ಇಲ್ಲ ಎಂದು ಕೆಂಡಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರ ಖಾತೆ ಲಾಕ್ ಮಾಡಿದ ಟ್ವಿಟರ್ ಗೆ ನೋಟಿಸ್