Publish Date: Tue, 21 Feb 2023 (10:18 IST)
Updated Date: Tue, 21 Feb 2023 (09:58 IST)
ಉಡುಪಿ : ರಾಜ್ಯೋತ್ಸವ, ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಸಾಹಿತಿ ಅಂಬಾತಯ ಮುದ್ರಾಡಿ ವಿಧಿವಶರಾಗಿದ್ದಾರೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿಯವರಾದ ಇವರು ಶಿಕ್ಷಕರಾಗಿದ್ದುಕೊಂಡು ಯಕ್ಷಗಾನ, ನಾಟಕ, ಸಾಹಿತ್ಯ ಹೀಗೆ ಹಲವು ಆಯಾಮಗಳಲ್ಲಿ ಖ್ಯಾತರಾಗಿದ್ದರು.
ಸಾತ್ವಿಕ ಮನೋಭಾವದ ಸಹೃದಯಿ ಅಂಬಾತನಯ ಮುದ್ರಾಡಿ (88) ಮಂಗಳವಾರ ಮುಂಜಾನೆ ಅಗಲಿದ್ದಾರೆ. ಶಿಕ್ಷಕ, ಹರಿದಾಸ, ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ ಪೂರ್ಣವಾದ ಸಾಧನೆಯನ್ನು ಮಾಡಿದ್ದ ಅವರು,
ಸಮಾಜದ ಎಲ್ಲ ಮಂದಿಗೆ ಮನೆಯ ಸದಸ್ಯನಂತೆ ಇದ್ದು ಮಾರ್ಗದರ್ಶನ ಮಾಡಿದ್ದರು. ಸಾರ್ಥಕವಾಗಿ ಬದುಕನ್ನು ಪೂರೈಸಿದ ಅಂಬಾತನಯರದ್ದು ಆದರ್ಶ ಜೀವನ ಎಂದು ಅವರ ಹಿತೈಶಿಗಳ ಮನದಾಳದ ಮಾತು.
ಕಳೆದ ವಾರ ಉಡುಪಿಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡದ್ದು, ಅವರ ಕೊನೆಯ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ ಪುಸ್ತಕವನ್ನು ಪ್ರಕಟಿಸಲಾಗಿತ್ತು.
ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಅವರಿಗೆ ಅರ್ಹವಾಗಿ ಪ್ರಾಪ್ತಿಯಾಗಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ. ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ವೃಂದವನ್ನು ಅಂಬಾತನಯರು ಅಗಲಿದ್ದಾರೆ.