ಕಾಮಗಾರಿ ಪ್ರಯುಕ್ತ ಸ್ಥಗಿತಗೊಂಡಿರುವ ಗೊರಗುಂಟೆಪಾಳ್ಯ- ಚಿಕ್ಕಬಿದರಕಲ್ಲು ನಡುವಿನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಶೀಘ್ರದಲ್ಲಿಯೇ ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಅತಿ ಶೀಘ್ರದಲ್ಲಿಯೇ ತುಮಕೂರು ರಸ್ತೆಯ ವಾಹನ ದಟ್ಟಣೆಗೆ ಬ್ರೇಕ್ ಬೀಳಲಿದೆ.
ಪೀಣ್ಯ ಮೇಲ್ಸೇತುವೆಯಲ್ಲಿ ಲೋಡ್ ಟೆಸ್ಟಿಂಗ್ ಆರಂಭವಾಗಿದ್ದು ಕಳೆದ 48 ತಾಸು ಪರೀಕ್ಷಾರ್ಥ ವಾಹನ ಸಂಚಾರ ಮಾಡಲಾಗಿದೆ. ಗೊರಗುಂಟೆ ಪಾಳ್ಯದಿಂದ ಚಿಕ್ಕಬಿದರಕಲ್ಲು ವರೆಗೆ ಮೇಲ್ಸೇತುವೆ ಪರೀಕ್ಷಿಸಿದ್ದು, ಕೆಲವೇ ದಿನಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಮೇಲ್ಸೇತುವೆ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಪೀಣ್ಯ ಮೇಲ್ಸೇತುವೆ ರಸ್ತೆ ಬಂದ್ ಮಾಡಲಾಗಿತ್ತು. ಆದರೆ, ನಿಧಾನಗತಿಯ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ತ್ವರಿತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಪ್ರಾಧಿಕಾರ ಪರೀಕ್ಷಾರ್ಥ ವಾಹನ ಸಂಚಾರ ಮಾಡಿದೆ. ಕೆಲವೇ ದಿನಗಳಲ್ಲಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.